ಸಳ್ಯ: ರಾಜಕಾರಣಿಗಳಿಗೆ ಗೇಟ್‌ನೊಳಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಅಳವಡಿಕೆ: ಭರವಸೆಯ ಪುಂಗಿ ಊದುವವರಿಗೆ ಮತದಾರನ ಎಚ್ಚರಿಕೆ ಗಂಟೆ
ಮಂಗಳೂರು, ಏಪ್ರಿಲ್, 08: ರಾಜ್ಯ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಕೆಲವು ಕ್ಷೇತ್ರಗಳಲ್ಲಿ ರಾಜಕಾರಣಿಗಳು ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲವೆಂದು ಜನರು ಮತದಾನ ಬಹಿಷ್ಕರಿಸುವುದನ್ನು ನೋಡಿದ್ದೇವೆ. ಇದೀಗ ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಬೇಸತ್ತ ವ್ಯಕ್ತಿಯೋರ್ವರು ಮನೆಯ ಗೇಟ್‌ಗೆ ರಾಜಕಾರಣಿಗಳಿಗೆ ಪ್ರವೇಶ ನಿಷೇಧ ಎಂಬ ಬ್ಯಾನರ್ ಅನ್ನು ಅಳವಡಿಸಿದ ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ.
ಸುಳ್ಯ ತಾಲೂಕಿನಾದ್ಯಂತ ನಾನಾ ಭಾಗಗಳಲ್ಲಿ ಸಾರ್ವಜನಿಕರು ಮತದಾನ ಬಹಿಷ್ಕಾರದ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಹೀಗೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವುದು ಸುಳ್ಯ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ. ಹೀಗೆ ಮತದಾರರೋರ್ವರು ಯಾವುದೇ ರಾಜಕಾರಣಿಗಳಿಗೆ ನಮ್ಮ ಮನೆಯ ಗೇಟಿನೊಳಗೆ ಪ್ರವೇಶವಿಲ್ಲ ಎಂಬ ಫಲಕವನ್ನು ಅಳವಡಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸುಳ್ಯ ತಾಲೂಕಿನ ಅಜ್ಜಾವರ ಮುಂಡೋಳಿ ಮೂಲೆಯ ಗೋಪಾಲಕೃಷ್ಣ ಮನೆಯವರು ಈ ಭಾಗದ ರಸ್ತೆ ನಿರ್ಮಾಣ ಸಂದರ್ಭದಲ್ಲಿ ತಮ್ಮ ಕೃಷಿ ಭೂಮಿಯಿಂದ ಮಣ್ಣನ್ನು ನೀಡಿರುತ್ತಾರೆ. ಆದರೆ ರಸ್ತೆಗೆ ಸುರಿಯುವ ಮಣ್ಣು ಮಳೆಗಾಲದಲ್ಲಿ ವಾಪಸ್ ಬಂದು ಮೋರಿಯಲ್ಲಿ ಸಿಕ್ಕಿ ಕೊಳ್ಳುತ್ತಿದ್ದು, ಈ ಭಾಗದಲ್ಲಿ ಹರಿದು ಬರುವ ನೀರೆಲ್ಲಾ ಕೊನೆಗೆ ಕೃಷಿ ಭೂಮಿಯಲ್ಲಿ ತುಂಬಿಕೊಳ್ಳುತ್ತಿದೆ. ಇದನ್ನು ಸರಿಪಡಿಸಿಕೊಡುವಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಪ್ರಯೋಜನಾ ಇಲ್ಲದಂತಾಗಿದೆ.
ಅಲ್ಲದೆ ಗಂಗಾ ಕಲ್ಯಾಣ ಯೋಜನೆಯಡಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಶಾಸಕರು ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಸಮಸ್ಯೆಯನ್ನೂ ಸಹ ಬಗೆಹರಿಸಿಲ್ಲ. ಇದರಿಂದ ಬೇಸತ್ತ ಮುಂಡೋಳಿ ಮೂಲೆ ಮನೆಯವರು, ನಮ್ಮ ಮನೆಯ ಕಡೆಗೆ ರಾಜಕಾರಣಿಗಳು ಬರಬೇಡಿ ಎನ್ನುವ ಬೋರ್ಡ್ ಅನ್ನು ಗೇಟಿಗೆ ನೇತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್.ಅಂಗಾರಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಳ
ಇದೀಗ ಇದೇ ವಿಚಾರಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಆರು ಭಾರಿ ಆಯ್ಕೆಯಾದ ಸಚಿವ ಎಸ್.ಅಂಗಾರ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಈ ಬಾರಿ ಸುಳ್ಯದಲ್ಲಿ ಅಭ್ಯರ್ಥಿ ಬದಲಾವಣೆ ಆಗಬೇಕೆಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಬಿಜೆಪಿಯಲ್ಲಿ ನಡೆದ ಆಂತರಿಕ ಸಮೀಕ್ಷೆಯಲ್ಲೂ ಕ್ಷೇತ್ರದಲ್ಲಿ ಅಂಗಾರ ವಿರುದ್ಧ ಅಸಮಾಧಾನದ ಅಲೆ ಕಂಡುಬಂದಿತ್ತು. ಇದನ್ನೆಲ್ಲ ಗಮನಿಸಿದರೆ ಈ ಬಾರಿ ಎಸ್.ಅಂಗಾರಗೆ ಕೊಕ್ ನೀಡುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿಬಂದಿವೆ.
5 ವರ್ಷಗಳಿಂದ ಮೂಲಸೌಲಭ್ಯಗಳ ಕೊರತೆ
ಪ್ರತಿಬಾರಿಯೂ ಮಳೆಗಾಲದ ವೇಳೆ ನೆರೆಹಾವಳಿಗೆ ಒಳಗಾಗುತ್ತಿದ್ದ ಗೋಕರ್ಣದ ಸಣ್ಣ ಬಿಜ್ಜೂರಿನ ಹಲವು ಕುಟುಂಬಗಳಿಗೆ ಸರ್ಕಾರ 50 ವರ್ಷಗಳ ಹಿಂದೆ ಭೂಮಿ ಮಂಜೂರಿ ಮಾಡಿತ್ತು. ಆದರೆ ಇದೀಗ ಇಲ್ಲಿನ ಜನಪ್ರತಿಧಿಗಳ ನಿರ್ಲಕ್ಷದಿಂದ ಜನರು ಮನೆಗಳಿದ್ದರೂ ಸೂಕ್ತ ಸೌಲಭ್ಯ ಪಡೆಯಲಾಗದೆ ಕನಿಷ್ಠಮಟ್ಟದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರಕನ್ನಡ ಜಿಲ್ಲೆಯ ವಿಶ್ವ ಪ್ರಸಿದ್ಧ ಗೋಕರ್ಣದಿಂದ ಕೆಲವೇ ಕಿ.ಮೀ ಅಂತರದಲ್ಲಿರುವ ಸಣ್ಣ ಬಿಜ್ಜೂರಿನ ಜನ ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಗ್ರಾಮದ ಸರ್ವೆ ನಂಬರ್ 283ರಲ್ಲಿ 1973ರಲ್ಲಿಯೇ ಪ್ಲಾಟ್‌ಗಳಾಗಿ ವಿಂಗಡಿಸಿ ಜನರಿಗೆ ಕಬ್ಜಾ ನೀಡಲಾಗಿದೆ. ಕಾಲೋನಿಯಲ್ಲಿ ದಲಿತ ಹಾಗೂ ಹಿಂದುಳಿದ ವರ್ಗದ ಕುಟುಂಬಗಳೇ ಹೆಚ್ಚಾಗಿ ವಾಸವಾಗಿದ್ದು, ಅವರಿಗೆ ಇದುವರೆಗೂ ಹಕ್ಕು ಪತ್ರ ನೀಡಿಲ್ಲ.
ಸರ್ಕಾರ ಮಾತ್ರ ಎಲ್ಲ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದಾಗಿ ಹೇಳಿತ್ತಿದೆ. ಆದರೆ ಇಲ್ಲಿನ ನಿವಾಸಿಗಳಿಗೆ ಯಾವುದೇ ಸೌಲಭ್ಯ ತಲುಪದೆ ಇಂದಿಗೂ ಪ್ರಾಣಿಗಳಂತೆ ಕನಿಷ್ಠ ಮಟ್ಟದ ಜೀವನ ನಡೆಸುವಂತಾಗಿದೆ. ಸರ್ಕಾರ ನೀಡಿದ ಗಾಂವಠಾಣಾ ಜಾಗದಲ್ಲಿ ಬಹುತೇಕರು ಸಣ್ಣ ಮನೆ, ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಸರ್ಕಾರದಿಂದ ಮನೆ ಸೇರಿದಂತೆ ಇನ್ನಿತರ ಯಾವುದೇ ದೊಡ್ಡ ಮಟ್ಟದ ಸೌಲಭ್ಯಗಳು ಬಂದರೂ, ಸ್ಥಳೀಯ ಗ್ರಾಮ ಪಂಚಾಯಿತಿಯವರು ನಿಮಗೆ ಆರ್‌ಟಿಸಿ ಇಲ್ಲ ಎಂದು ನಿರಾಕರಣೆ ಮಾಡುತ್ತಿದ್ದಾರೆ.












Click it and Unblock the Notifications