ಸಂಪುಟ ನರಸಿಂಹ ಮಠದ ಕ್ರಮ ವಿರೋಧಿಸಿ ಇಂದು ಸುಬ್ರಹ್ಮಣ್ಯ ಬಂದ್
ಮಂಗಳೂರು, ಮಾರ್ಚ್ 07: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ತಮ್ಮ ಸ್ವಾಧೀನಕ್ಕೆ ನೀಡಬೇಕೆನ್ನುವ ಸಂಪುಟ ನರಸಿಂಹ ಮಠದ ಯತ್ನವನ್ನು ವಿರೋಧಿಸಿ ಇಂದು ಸುಬ್ರಹ್ಮಣ್ಯ ಬಂದ್ ಮಾಡಲಾಗಿದೆ.
ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯ ದೇವಸ್ಥಾನವನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಮುಂದಾಗಿರುವುದನ್ನು ವಿರೋಧಿಸಿ ಕುಕ್ಕೆ ಶ್ರೀ ಕ್ಷೇತ್ರ ಭಕ್ತರ ಹಿತರಕ್ಷಣಾ ವೇದಿಕೆ ಈ ಬಂದ್ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದ ಸುಬ್ರಹ್ಮಣ್ಯ ಕ್ಷೇತ್ರ ಪರಿಸರದ ಬಹುತೇಕ ಅಂಗಡಿಗಳು ಬಂದ್ ಆಗಿವೆ.
ಈ ನಡುವೆ ಸಂಪುಟ ನರಸಿಂಹ ಮಠದ ವಿರುದ್ಧ ಬಂದ್ ಆಚರಿಸದಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಮಠದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಬಲತ್ಕಾರದ ಬಂದ್ ಗೆ ಅವಕಾಶ ನೀಡದಂತೆ ಪೋಲೀಸ್ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ.

ಈ ನಡುವೆ ಮಠಕ್ಕೆ ಸೇರಿದ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಇಂದು ಮುಚ್ಚಿವೆ. ಕ್ಷೇತ್ರದಲ್ಲಿ ಅಂಗಡಿ ಮುಂಗಟ್ಟಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಅಗತ್ಯ ವಸ್ತುಗಳಿಗಾಗಿ ಪರದಾಡುವಂತಾಗಿದೆ.
ಇಂದು ಸಂಜೆವರೆಗೂ ಈ ಬಂದ್ ಮುಂದುವರೆಯಲಿದ್ದು, ಸಂಜೆ 6 ಗಂಟೆಯ ಬಳಿಕ ಅಂಗಡಿ ಮುಂಗಟ್ಟುಗಳು ತೆರೆಯಲಿವೆ. ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಸಂಪುಟ ನರಸಿಂಹ ನರಸಿಂಹ ಸ್ವಾಮಿ ಮಠಕ್ಕೆ ಹಸ್ತಾಂತರಿಸಬೇಕು ಎಂದು ಮುಜರಾಯಿ ಇಲಾಖೆಗೆ ಲಾಯರ್ ಇತ್ತೀಚೆಗೆ ನೋಟಿಸ್ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಸಂಪುಟ ನರಸಿಂಹ ಮಠದಿಂದ ನೀಡಲಾಗಿರುವ ಈ ನೋಟಿಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಪುಟ ನರಸಿಂಹ ಮಠದ ವಿರುದ್ಧ ದೇವಳದ ಭಕ್ತರ ಹಿತರಕ್ಷಣಾ ವೇದಿಕೆ ಮಾರ್ಚ್ 7ರಂದು ಸುಬ್ರಹ್ಮಣ್ಯ ಬಂದ್ ಗೆ ಕರೆ ನೀಡಿತ್ತು.












Click it and Unblock the Notifications