ಮೋದಿಗೆ ಧನ್ಯವಾದ ಹೇಳಿದ ಉಕ್ರೇನ್‌ನಿಂದ ಮರಳಿದ ಹೀನಾ ಫಾತಿಮಾ
ಮಂಗಳೂರು, ಮಾರ್ಚ್ 06; ಯುದ್ಧಪೀಡಿತ ಉಕ್ರೇನ್‌ನಲ್ಲಿ ಕಳೆದ ಹಲವು ದಿನಗಳಿಂದ ಜೀವಭಯದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಹೀನಾ ಫಾತಿಮಾ ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಕೊನೆಗೂ ತವರಿಗೆ ಮರಳಿದ್ದಾರೆ.
ಉಕ್ರೇನ್‌ನ ಭಯಾನಕ ಸ್ಥಿತಿ, ಭಾರತೀಯ ರಾಯಭಾರಿ ಕಚೇರಿ ನೆರವಾದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹೀನಾ ಫಾತಿಮಾ ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಖಾರ್ಕೀವ್‌ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹೀನಾ ಫಾತಿಮಾ, ಖಾರ್ಕೀವ್‌ನಿಂದ ಪೋಲೆಂಡ್‌ಗೆ ಬಂದು ಅಲ್ಲಿಂದ ದೆಹಲಿ ತಲುಪಿ. ಬೆಂಗಳೂರಿಗೆ ಆಗಮಿಸಿದ ಅಲ್ಲಿಂದ ಮಂಗಳೂರಿಗೆ ಆಗಮಿಸಿರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೀನಾ ಫಾತಿಮಾಳನ್ನು ಪೋಷಕರು ಬರ ಮಾಡಿಕೊಂಡರು. ಯುದ್ಧಭೂಮಿಯಿಂದ ಸುರಕ್ಷಿತವಾಗಿ ಮರಳಿ ಬಂದ ಮಗಳನ್ನು ಅಪ್ಪಿ ಮುದ್ದಾಡಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಹೀನಾ ಫಾತಿಮಾ, "ಉಕ್ರೇನ್‌ನ ಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ನಾವು ಖಾರ್ಕೀವ್ನಿಂದ ಗಡಿ ಭಾಗಕ್ಕೆ ಬರುವಾಗ ತುಂಬಾ ಕಷ್ಟ ಆಗಿತ್ತು. ರೈಲಿನಲ್ಲಿ ಫುಲ್ ರಶ್‌ನಲ್ಲಿ 24 ಗಂಟೆ ಪ್ರಯಾಣಿಸಿ ನಾವು ಗಡಿ ತಲುಪಿದೆವು. ರೈಲಿನಲ್ಲಿ ಮೊದಲು ಉಕ್ರೇನಿಯನ್ನರಿಗೆ ಅವಕಾಶ, ಮತ್ತೆ ಹುಡುಗಿಯರಿಗೆ ಅವಕಾಶ ನೀಡಲಾಗಿತ್ತು. ನಾವು ಬಾಂಬಿಂಗ್ ಎಲ್ಲಾ ಕಣ್ಣಾರೆ ನೋಡಿದ್ದೇವೆ, ನಮ್ಮ ಸ್ಥಳದಲ್ಲೇ ಆಗುತ್ತಿತ್ತು. ನಾವು ಖಾರ್ಕೀವ್‌ನ ಫ್ಲಾಟ್‌ನಲ್ಲಿ ಇದ್ದಿದ್ದು, ಶಬ್ದ ಕೇಳಿದಾಗೆಲ್ಲಾ ಬಂಕರ್ ಕೆಳಗೆ ಹೋಗುತ್ತಿದ್ದೆವು" ಎಂದು ಭಯಾನಕ ಸ್ಥಿತಿಯನ್ನು ತೆರೆದಿಟ್ಟರು.
"ಬಂಕರ್ ಮತ್ತು ಮೆಟ್ರೋ ಸ್ಟೇಷನ್ ಅಂಡರ್ ಗ್ರೌಂಡ್ ನಮಗೆ ಅಲ್ಲಿ ಸೇಫ್ ಆಗಿತ್ತು. ಭಾರತೀಯ ರಾಯಭಾರಿ ಕಚೇರಿ ಮೊದಲೇ ಸ್ಥಳಾಂತರಕ್ಕೆ ನಮಗೆ ಸೂಚಿಸಿತ್ತು. ಆದರೆ ಕಾಲೇಜಿನವರು 50-50 ಪರ್ಸೆಂಟ್ ಇದ್ದರು. ಹೋಗೋರು ಹೋಗಿ ಅಂದರು. ಇದ್ದವರಿಗೆ ಆಫ್ ಲೈನ್, ಹೋದವರಿಗೆ ಆನ್ ಲೈನ್ ಕ್ಲಾಸ್ ಮಾಡುತ್ತೇವೆ ಎಂದರು. ಹೀಗಾಗಿ ನಾವು ವಾರ್ ಆಗಲ್ಲ ಅಂತ ಅಲ್ಲೇ ಉಳಿದೆವು" ಎಂದರು.
"ಕೊನೆ ಕ್ಷಣದಲ್ಲಿ ವಾರ್ ಅಂತ ಆದ ಬೆನ್ನಲ್ಲೇ ನಾವಿದ್ದ ಜಾಗದಲ್ಲಿ ಬಾಂಬಿಂಗ್, ಶೆಲ್ಲಿಂಗ್ ಆಗಿದೆ. ನವೀನ್ ನನ್ನ ಸೀನಿಯರ್, ಅಲ್ಲಿನ ಉತ್ತಮ ವಿದ್ಯಾರ್ಥಿ ಆಗಿದ್ದರು. ಅವರು ನಮಗೆ ಏನು ಓದಬೇಕು?, ಹೇಗೆ ಇರಬೇಕು ಅಂತ ಹೇಳಿಕೊಡುತ್ತಿದ್ದರು. ಸರ್ಕಾರ ಮುಂದೆ ಭಾರತದಲ್ಲೇ ನಮಗೆ ಒಂದು ವ್ಯವಸ್ಥೆ ಮಾಡಲಿ. ಉಕ್ರೇನ್‌ನಿಂದ ಬಂದವರಿಗೆ ಒಂದು ಸಂಸ್ಥೆ ಮಾಡಿ ಶಿಕ್ಷಣಕ್ಕೆ ನೆರವಾಗಲಿ. ಇಲ್ಲವಾದರೆ ಅಲ್ಲೇ ಭವಿಷ್ಯದಲ್ಲಿ ನಮಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಉತ್ತಮ" ಎಂದು ಹೇಳಿದರು.
"ಪೋಲೆಂಡ್ ಗಡಿಯಲ್ಲಿ ಸಾಕಷ್ಟು ಸ್ವಯಂ ಸೇವಕರು ಇದ್ದರು. ಅವರು ನಮಗೆ ಪಾಸಿಟಿವ್ ವೈಬ್ಸ್ ಕೊಟ್ಟರು, ಇದು ಖುಷಿಯಾಗಿತ್ತು. ನಾವು ಲೀವ್ ತಲುಪಿ ಟ್ಯಾಕ್ಸಿಯಲ್ಲಿ ಹೋಗಿ ಒಂದು ಕಿ. ಮೀ. ನಡೆದು ಪೋಲೆಂಡ್ ತಲುಪಿದೆವು. ಭಾರತೀಯ ರಾಯಭಾರ ಕಚೇರಿ ತುಂಬಾ ಸಹಾಯ ಮಾಡಿದೆ. ನಾನು ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ. ಅಲ್ಲಿಂದ ನಮಗೆ ಆಹಾರ, ವಸತಿ ಎಲ್ಲಾ ಕೊಟ್ಟು ರಾಯಭಾರಿ ಕಚೇರಿ ಚೆನ್ನಾಗಿ ನೋಡಿಕೊಂಡಿದೆ" ಎಂದು ವಿವರಿಸಿದರು.












Click it and Unblock the Notifications