ಕಾಲೇಜು ಶುಲ್ಕ ಒತ್ತಡ: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
ಮಂಗಳೂರು, ಅಕ್ಟೋಬರ್ 6: ಫೀಸ್ ಕಟ್ಟುವಂತೆ ಕಾಲೇಜಿನ ಒತ್ತಡಕ್ಕೆ ಕುಗ್ಗಿದ್ದ ನರ್ಸಿಂಗ್ ವಿದ್ಯಾರ್ಥಿನಿ ಕಾಲೇಜು ಹಾಸ್ಟೆಲ್‌ನಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಡಾ. ಲ್ಯಾಡೋ ಕೊಲಾಸೋ ಕಾಲೇಜಿನ ನೀನಾ ಸತೀಶ್ ಆತ್ಮಹತ್ಯೆ ಮಾಡಿಕೊಂಡ ಪ್ರಥಮ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ.
ಕೇರಳದ ಕಾಸರಗೋಡು ನಿವಾಸಿ ನೀನಾ ಸತೀಶ್, ಮಂಗಳೂರಿನ ಡಾ. ಲ್ಯಾಡೋ ಕೊಲಾಸೋ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ಕೋರ್ಸ್‌ಗೆ ದಾಖಲಾಗಿದ್ದರು. ಕೊಲಾಸೋ ಕಾಲೇಜಿನ ಹಾಸ್ಟೆಲ್‌ನಲ್ಲಿ ನೀನಾ ಸತೀಶ್ ವಾಸ್ತವ್ಯ ಮಾಡುತ್ತಿದ್ದರು. ಆದರೆ ಮಂಗಳವಾರ ಬೆಳಗ್ಗೆ ನೀನಾ ಸತೀಶ್ ಹಾಸ್ಟೆಲ್‌ನ ಬಾತ್ ರೂಂನಲ್ಲಿ ನೇಣಿಗೆ ಶರಣಾಗಿದ್ದಾಳೆ. ನೀನಾ ಸತೀಶ್ ಸಾವಿನ ಹಿಂದೆ ಕಾಲೇಜಿನ ಫೀಸ್ ಕಟ್ಟಬೇಕೆಂಬ ಒತ್ತಡ ಇತ್ತು ಎಂಬ ಆರೋಪಗಳು ಕೇಳಿ ಬಂದಿದೆ.
ಆದರೆ, "ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್‌ನ್ನು ಬರೆದಿದ್ದಾಳೆ. ಡೆತ್ ನೋಟ್‌ನಲ್ಲಿ ಕಾಲೇಜಿಗೆ 75 ಸಾವಿರ ಫೀಸ್ ಕಟ್ಟಿದ್ದೇವೆ. ಆದರೆ ಇನ್ನೂ ಹಣ ಕಟ್ಟಬೇಕಿದೆ, ಅದನ್ನು ಕಟ್ಟಬೇಕು. ಹಾಸ್ಟೆಲ್‌ನಲ್ಲಿ ಎಲ್ಲರೂ ಹೊರ ಹೋದ ಮೇಲೆ ಬಾತ್ ರೂಂಗೆ ಹೋಗಿ, ಬಾತ್ ರೂಂನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಡೆತ್‌ನೋಟ್ ಬರೆದಿದ್ದಾಳೆ," ಎಂದು ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

"ತಾಯಿಗೆ ಆರ್ಥಿಕ ಸಮಸ್ಯೆ ಇದೆ. ಫೀಸ್ ಕಟ್ಟುವುದಕ್ಕೆ ತುಂಬಾ ಕಷ್ಟ ಇದೆ. ನಾನು ವಿದ್ಯಾಭ್ಯಾಸ ಮಾಡುವುದರಿಂದ ತಾಯಿಗೆ ತುಂಬಾ ಕಷ್ಟವಾಗುತ್ತದೆ. ನಾನು ಬದುಕಿ ಅವರಿಗೆ ಸುಖ ನೀಡುವುದಕ್ಕೆ ಸಾಧ್ಯವಿಲ್ಲ. ನಾನು ಸತ್ತ ಬಳಿಕವಾದರೂ ತಾಯಿ ನೆಮ್ಮದಿಯಿಂದ ಇರಲಿ," ಅಂತಾ ವಿದ್ಯಾರ್ಥಿನಿ ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾಳೆ.
ಶುಲ್ಕ ಕಾರಣವಲ್ಲ: ಪೊಲೀಸ್ ಕಮೀಷನರ್
ಆದರೆ ಈ ಆರೋಪದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ನರ್ಸಿಂಗ್ ವಿದ್ಯಾರ್ಥಿನಿ ನೀನಾ ಸತೀಶ್ ಸಾವಿನ ಬಗ್ಗೆ ಹಲವು ಆರೋಪಗಳು ಕೇಳಿಬಂದಿತ್ತು. ಪೊಲೀಸರೂ ಅಡ್ಮಿಷನ್ ಲಾಬಿ ಮಾಡುತ್ತಿದ್ದಾರೆ ಅಂತಾ ಆರೋಪ ಕೇಳಿಬಂದಿದೆ. ಆದರೆ ಈ ಆರೋಪ ಸತ್ಯಕ್ಕೆ ದೂರವಾಗಿದೆ. ನಾನೇ ಖುದ್ದಾಗಿ ಕೊಲಾಸೋ ಕಾಲೇಜು, ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಹಾಸ್ಟೆಲ್, ಶವಗಾರಕ್ಕೆ ಭೇಟಿ ನೀಡಿದ್ದೇನೆ. ವಿದ್ಯಾರ್ಥಿನಿಯ ಹೆತ್ತವರು ಮತ್ತು ಸ್ನೇಹಿತೆಯರ ಜೊತೆ ಮಾತನಾಡಿದ್ದೇನೆ. ಕಾಲೇಜು ಫೀಸ್ ಕಟ್ಟಬೇಕೆಂಬ ಒತ್ತಡಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.

"ವಿದ್ಯಾರ್ಥಿನಿ ಮಲಯಾಳಂ ಭಾಷೆಯಲ್ಲಿ ಡೆತ್ ನೋಟ್ ಬರೆದಿದ್ದಾಳೆ. ಡೆತ್ ನೋಟ್‌ನ್ನು ಆಸ್ಪತ್ರೆಯ ಮಲಯಾಳಂ ಭಾಷೆ ಬಲ್ಲ ಸಿಬ್ಬಂದಿಯಿಂದ ಓದಿಸಿದ್ದೇನೆ. ವಿದ್ಯಾರ್ಥಿನಿಯ ಸಾವಿನ ಹಿಂದೆ ಕಾಲೇಜಿನ ಕಿರುಕುಳ ಕೊಟ್ಟ ಬಗ್ಗೆ ಯಾವುದೇ ಮಾಹಿತಿ ಡೆತ್ ನೋಟ್‌ನಲ್ಲಿ ಇರಲಿಲ್ಲ," ಎಂದು ಕಮೀಷನರ್ ಸ್ಪಷ್ಟಪಡಿಸಿದ್ದಾರೆ.
"ಆದರೆ ಕಾಲೇಜಿನಿಂದ ಮೃತ ವಿದ್ಯಾರ್ಥಿನಿಯ ತಾಯಿಗೆ ಫೀಸ್ ಕಟ್ಟುವಂತೆ ಕರೆ ಹೋಗಿದೆ. ಎಲ್ಲರೂ ಫೀಸ್ ಕಟ್ಟಿದ್ದಾರೆ, ನೀವೂ ಕಟ್ಟಬೇಕು ಅಂತಾ ಹೇಳಿದ್ದಾರೆ. ವಿದ್ಯಾರ್ಥಿನಿಯ ತಾಯಿ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡಿರುವ ಕಾರಣ ಕಾಲೇಜಿಗೆ ಬಂದು ಮನವಿ ಮಾಡಬೇಕು ಅಂತಾ ವಿದ್ಯಾರ್ಥಿನಿ ತಾಯಿಯ ಮುಂದೆ ಹೇಳಿಕೊಂಡಿದ್ದಾಳೆ," ಎಂದು ಮಂಗಳೂರು ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
"ಸದ್ಯ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ಸಾವಿನ ಬಗ್ಗೆ ಅಸಹಜ ಸಾವು ಅಂತಾ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಸಾವಿನ ಬಗ್ಗೆ ಪೋಷಕರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ," ಅಂತಾ ಕಮೀಷನರ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications