ಬೆಳಗಾವಿ ಟು ಶಬರಿಮಲೆ: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಜೊತೆಗೆ ಶ್ವಾನದ ಪಾದಯಾತ್ರೆ
ಮಂಗಳೂರು, ನವೆಂಬರ್ 21: ಕಾರ್ತಿಕ ಮಾಸ ಆರಂಭಗೊಳ್ಳುತ್ತಿದ್ದಂತೆಯೇ ಅಯ್ಯಪ್ಪ ಭಕ್ತರ ದಂಡು ಶಬರಿಮಲೆಯತ್ತ ಹೆಜ್ಜೆ ಹಾಕುತ್ತಿದೆ. ಊರು ಕೇರಿಗಳಲ್ಲಿ ಅಯ್ಯಪ್ಪನ ಭಕ್ತಿಸುಧೆಯೇ ಹರಿಯುತ್ತಿದೆ. ಈ ಮಧ್ಯೆ ಶಬರಿಮಲೆಯ ಯಾತ್ರಾರ್ಥಿಗಳ ಜೊತೆ ಶ್ವಾನವೊಂದು ಶಬರಿಮಲೆಯತ್ತ ಹೆಜ್ಜೆ ಹಾಕುತ್ತಿರುವುದು ಆಶ್ಚರ್ಯ ಮೂಡಿಸಿದೆ.
ಬೆಳಗಾವಿಯಿಂದ ಹೊರಟ ಶಬರಿಮಲೆ ಮಾಲಾಧಾರಿಗಳ ಪಾದಯಾತ್ರೆಯಲ್ಲಿ ಶ್ವಾನ ಪ್ರತಿದಿನ ಅವರ ಜೊತೆ ನಲವತ್ತು ಕಿಲೋಮೀಟರ್ ಹೆಜ್ಜೆ ಹಾಕುತ್ತಿದ್ದು, ಅಯ್ಯಪ್ಪನ ಮೇಲಿನ ಭಕ್ತಿಯನ್ನು ತೋರಿಸಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪಾದಯಾತ್ರೆಯಲ್ಲಿ ಶ್ವಾನವೊಂದು ಅಯ್ಯಪ್ಪ ದೇವರ ಸನ್ನಿಧಾನದತ್ತ ಹೆಜ್ಜೆ ಹಾಕುತ್ತಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೇಕ್ಕೇರಿ ಗ್ರಾಮದಿಂದ ಅಯ್ಯಪ್ಪ ಮಾಲಾಧಾರಿಗಳ ತಂಡ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ನವೆಂಬರ್ 4 ರಂದು ಪಾದಯಾತ್ರೆ ಶುರುಮಾಡಿದ್ದ ಈ ತಂಡಕ್ಕೆ ಗೋಕಾಕ್ ತಾಲೂಕಿನ ಗ್ರಾಮದಿಂದ ಶ್ವಾನವೊಂದು ಅಯ್ಯಪ್ಪ ಮಾಲಾಧಾರಿಗಳನ್ನು ಹಿಂಬಾಲಿಸಿದೆ.
ಈಗಾಗಲೇ ಈ ಶ್ವಾನ ತಂಡದೊಂದಿಗೆ ಸುಮಾರು 600 ಕಿಮೀ ಕ್ರಮಿಸಿದೆ. ಬೆಕ್ಕೇರಿ ಗ್ರಾಮದ ಹತ್ತು ಮಂದಿ ಮಾಲಾಧಾರಿಗಳ ತಂಡ ಈಗ ಮಂಗಳೂರು ಮೂಲಕ ಕೇರಳ ರಾಜ್ಯದ ಕಾಸರಗೋಡಿಗೆ ತಲುಪಿದ್ದಾರೆ. ಆರಂಭದಲ್ಲಿ ಈ ಹೆಣ್ಣು ಶ್ವಾನ ಹಿಂಬಾಲಿಸೋದನ್ನು ಕಂಡ ಸ್ವಾಮಿಗಳು ಸ್ವಲ್ಪ ಹೊತ್ತು ಬರಬಹುದು ಮತ್ತೆ ವಾಪಸ್ ಹೋಗಬಹುದು ಅಂದುಕೊಂಡಿದ್ದರು.
ಗುರು ಸ್ವಾಮಿಗಳು ಶ್ವಾನವನ್ನು ಓಡಿಸಲೂ ಪ್ರಯತ್ನ ಪಟ್ಟರು ಆದರೆ ಅದು ಹೋಗಲಿಲ್ಲ, ನಮ್ಮ ಜೊತೆಗೆ ಬಂದಿದೆ. ನಾವು ನೀಡುತ್ತಿರುವ ಆಹಾರವನ್ನು ಮಾತ್ರ ಸೇವಿಸುತ್ತದೆ, ಬೆಳಗ್ಗೆ ಬೇಗ ನಮ್ಮ ಜೊತೆಗೆ ಪಾದಯಾತ್ರೆ ಶುರುಮಾಡುತ್ತದೆ, ನಾವು ಎಲ್ಲೆ ವಾಸ್ತವ್ಯ ಮಾಡುತ್ತೇವೆ ಅಲ್ಲೇ ಅದು ಕೂಡ ಇರುತ್ತದೆ ಎಂದು ಅಯ್ಯಪ್ಪ ಮಾಲಾಧಾರಿ ರಾಚಪ್ಪ ಬಡಿಗೇರ್ ಹೇಳಿದ್ದಾರೆ.
ಈಗಾಗಲೇ 14 ದಿನಗಳ ಪಾದಯಾತ್ರೆ ಮುಗಿಸಿರುವ ಇವರು ಇನ್ನೂ 500 ಕಿಮೀ ಪಾದಯಾತ್ರೆ ಮಾಡಲಿದ್ದಾರೆ. ಶಬರಿಮಲೆಗೆ ಡಿಸೆಂಬರ್ 4 ಅಥವಾ 5 ನೇ ತಾರೀಕಿಗೆ ತಲುಪುವ ವಿಶ್ವಾಸವನ್ನು ಹೊಂದಿದ್ದಾರೆ. ಸ್ವಾಮಿಗಳ ಜೊತೆ ಬರುವಾಗ ಕೇವಲ ಸಸ್ಯಹಾರವನ್ನು ಮಾತ್ರ ಸ್ವೀಕರಿಸುವ ಶ್ವಾನದ ಸ್ವಾಮಿ ಭಕ್ತಿ ನಿಜಕ್ಕೂ ಮೆಚ್ಚುವಂತಹದ್ದಾಗಿದೆ.












Click it and Unblock the Notifications