ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟ: ಲಾಠಿ ಚಾರ್ಜ್
ಆರೆಸ್ಸೆಸ್ ಕಾರ್ಯಕರ್ತ ಶರತ್ ಅವರ ಶವಯಾತ್ರೆ ವೇಳೆ ಕಲ್ಲು ತೂರಾಟ. ಮಂಗಳೂರಿನ ಕೈಕಂಬ ಎಂಬಲ್ಲಿ ಉದ್ರಿಕ್ತರಿಂದ ಕಲ್ಲು ತೂರಾಟ. ಒಬ್ಬನಿಗೆ ಗಾಯ, ಆಸ್ಪತ್ರೆಗೆ ದಾಖಲು.
ಮಂಗಳೂರು, ಜುಲೈ 8: ಶನಿವಾರ ಮೃತಪಟ್ಟ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಶವಯಾತ್ರೆ ವೇಳೆ ಮಂಗಳೂರಿನ ಬಳಿ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಶವವಿಟ್ಟಿದ್ದ ವಾಹನವು ಮಂಗಳೂರಿನ ಕೈಕಂಬದ ಬಳಿಗೆ ಬಂದಾಗ ಉದ್ರಿಕ್ತರ ಗುಂಪೊಂದು ವಾಹನವನ್ನು ತಡೆದು ನಿಲ್ಲಿಸಿತು.

ಮೃತದೇಹವನ್ನು ಇಳಿಸಲು ಸಂಘಪರಿವಾರದ ಕಾರ್ಯಕರ್ತರು ಮುಂದಾಗಿದ್ದು, ಈ ಸಂದರ್ಭ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಲು ಮುಂದಾದಾಗ ಕಲ್ಲುತೂರಾಟ ನಡೆದಿದೆ.

ಬಸ್ ಗಳು, ವಾಹನಗಳು, ಅಂಗಡಿಗಳ ಮೇಲೆ ಕಲ್ಲುತೂರಾಟ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಶರತ್ ಮಡಿವಾಳ ಸಜಿಪಮುನ್ನೂರು ಗ್ರಾಮದ ಕಂದೂರು ನಿವಾಸಿ ತನಿಯಪ್ಪ ಎಂಬವರ ಮಗನಾಗಿದ್ದು 28 ವರ್ಷ ವಯಸ್ಸಾಗಿತ್ತು.

ಬಿ.ಸಿ.ರೋಡಿನಲ್ಲಿ ಉದಯಲಾಂಡ್ರಿಯನ್ನು ನಡೆಸುತ್ತಿದ್ದ ಅವರ ಮೇಲೆ ಮಂಗಳವಾರ ರಾತ್ರಿ ಕೆಲಸ ಮುಗಿಸಿ, ಅಂಗಡಿಯಿಂದ ಹೊರಬರುತ್ತಿದ್ದ ವೇಳೆ ದಾಳಿ ನಡೆದಿತ್ತು.

ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಶರತ್ ಗೆ ನಗರದ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಶನಿವಾರ ಬೆಳಿಗ್ಗೆಯಷ್ಟೇ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಶರತ್ ಹಲ್ಲೆಗೈದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಿ.ಸಿ. ರೋಡಿನಲ್ಲಿ ಪ್ರತಿಭಟನೆ ನಡೆಸಿದ್ದರು.

ಆದರೆ, ಶನಿವಾರ ಸಂಜೆ ವೇಳೆಗೆ ಶರತ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದರು. ಇದೀಗ, ಅವರ ಶವಯಾತ್ರೆಯ ವೇಳೆ ಕಲ್ಲು ತೂರಾಟ ನಡೆದಿದ್ದರಿಂದಾಗಿ, ಮಂಗಳೂರಿನಲ್ಲಿ ಉದ್ವಿಗ್ನ ವಾತಾವರಣ ಮೂಡಿದೆ.













Click it and Unblock the Notifications