ಸೂಲಿಬೆಲೆ ವಿರುದ್ಧ ಹೇಳಿಕೆ; ರಮಾನಾಥ್ ರೈಗೆ ಸಮನ್ಸ್
ಮಂಗಳೂರು, ಜೂನ್ 15:ಯುವ ಬ್ರಿಗೇಡ್ ಮಾರ್ಗದರ್ಶಕ ಹಾಗು ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮಾನಾಥ್ ರೈ ಅವರಿಗೆ ಸಂಕಷ್ಟ ಎದುರಾಗಿದೆ.
ಮಂಗಳೂರಿನ ಜೆಎಂಎಫ್ ಸಿ ಕೋರ್ಟ್ ರಮಾನಾಥ್ ರೈ ವಿರುದ್ಧ ಆದೇಶ ಹೊರಡಿಸಿದೆ. ಮಾನನಷ್ಟ ಹಾಗೂ ಅವಹೇಳನಕಾರಿ ಭಾಷೆ ಪ್ರಯೋಗದ ಕಾರಣ ಐಪಿಸಿ ಸೆಕ್ಷನ್ 500 ಹಾಗೂ 504ರ ಪ್ರಕಾರ ಸಮನ್ಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ರಮನಾಥ ರೈ, ಮಂಗಳೂರು ಹೊರವಲಯದ ಅಸೈಗೋಳಿ ಎಂಬಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಂಕಣಕಾರ ಹಾಗು ಯುವ ಬ್ರಿಗೇಡ್ ಇದರ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಾಚ್ಯ ಹಾಗೂ ಮಾನಹಾನಿ ಪದ ಬಳಕೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಆ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆ ಸಮಯದಲ್ಲಿ ಅಂದಿನ ಸಚಿವರಾಗಿದ್ದ ರಮಾನಾಥ ರೈ ಅವರ ವಿರುದ್ಧ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ರಹೀಂ ಉಚ್ಚಿಲ್ ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಮಾಜಿ ಸಚಿವ ರಮಾನಾಥ ರೈ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮಾನನಷ್ಟ ಹಾಗೂ ಅವಹೇಳನಕಾರಿ ಭಾಷೆ ಪ್ರಯೋಗದ ಅಪರಾಧಗಳಿಗೆ ಐಪಿಸಿ ಸೆಕ್ಷನ್ 500 ಹಾಗೂ 504ರ ಪ್ರಕಾರ ಸಮನ್ಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಿದೆ.












Click it and Unblock the Notifications