ರಾಜ್ಯದ ಬಿಲ್ಲವ ಸಚಿವರು ಬ್ರಾಹ್ಮಣಶಾಹಿಗಳ ದಾಸರಾಗಿದ್ದಾರೆ; ಮಂಗಳೂರಿನಲ್ಲಿ ಪ್ರಣವಾನಂದ ಶ್ರೀ ಕಿಡಿ
ಮಂಗಳೂರು, ಸೆಪ್ಟೆಂಬರ್, 20: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಸುನೀಲ್ ಕುಮಾರ್ ಈಡೀಗ ಬಿಲ್ಲವ ಸಮುದಾಯದ ದಾರಿಯನ್ನು ತಪ್ಪಿಸುತ್ತಿದ್ದಾರೆ ಎಂದು ಕಲಬುರಗಿಯ ನಾರಾಯಣ ಗುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಮಂಗಳೂರಿನಲ್ಲಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿ ಘೋಷಣೆ ಮಾಡಿ ಎಂದು ನಾವು ಬೇಡಿಕೆ ಇಟ್ಟಿದ್ದೆವು. ಈ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಸುನಿಲ್ ಕುಮಾರ್ ಷಡ್ಯಂತ್ರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಈಡಿಗ ಸಮುದಾಯದ ಕಾರ್ಯಕ್ರಮದಲ್ಲಿ 5 ಕೋಟಿ ರೂಪಾಯಿ ಸಮುದಾಯ ಭವನ ನಿರ್ಮಾಣಕ್ಕೆ ಕೊಡುತ್ತೇವೆ ಎಂದು ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಸ್ಫೂರ್ತಿ ದಿನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ನಿಗಮ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದು, ಬಿಲ್ಲವ ಈಡಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪ ಮಾಡಿದರು.
14 ಜಾತಿಗಳಿಗೆ ಈಗಾಗಲೇ ನಿಗಮ ಮಂಡಳಿ ಘೋಷಣೆಯನ್ನು ಮಾಡಿದ್ದಾರೆ. "ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ನಿಗಮ ಮಂಡಳಿ ಬಗ್ಗೆ ಸ್ಪಷ್ಟನೆ ಕೊಡಲಿ." ಸಚಿವ ಸುನೀಲ್ ಕುಮಾರ್ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ಬಿಲ್ಲವ ಸಮುದಾಯವನ್ನು ಬಲಿ ಕೊಡುತ್ತಿದ್ದಾರೆ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ರಾಜಕೀಯ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಪಕ್ಷಗಳು ಬಿಲ್ಲವ ಸಮುದಾಯಕ್ಕೆ ತಲಾ ಮೂರು ಸೀಟು ಕೊಡಬೇಕು. 5 ಲಕ್ಷದ 35 ಸಾವಿರ ಬಿಲ್ಲವ ಮತಗಳು ಸಂಸದರ ಕ್ಷೇತ್ರದಲ್ಲಿ ಇದೆ ಎಂದು ಹೇಳಿದರು.

ಮುಖ್ಯಮಂತ್ರಿಗಳಿಗೆ ಪ್ರಣವಾನಂದ ಶ್ರೀ ಸವಾಲ್
ಪ್ರವೀಣ್ ನೆಟ್ಟಾರ್ ಅವರ ಪತ್ನಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಇದು ತಾತ್ಕಾಲಿಕ ಕೆಲಸವಾಗಿದೆ. ಮುಖ್ಯಮಂತ್ರಿಗಳ ಮನೆಗೆ ಹೋದರೆ ನಾಳೆ ಕೆಲಸ ಇರುವುದಿಲ್ಲ. ನಿಮಗೆ ತಾಕತ್ತಿದ್ದರೆ ಖಾಯಂ ಕೆಲಸ ನೀಡಿ ಎಂದು ಸವಾಲ್ ಹಾಕಿದರು. ಬಸ್ ಸ್ಟ್ಯಾಂಡ್, ಮೆಟ್ರೋ, ಬಿಲ್ಡಿಂಗ್‌ಗೆ ನಾರಾಯಣ ಗುರುಗಳ ಹೆಸರು ಬೇಡ. ನಿಜವಾಗಿ ಗುರುಗಳ ಮೇಲೆ ಭಕ್ತಿ ಇದ್ದರೆ ವಿಧಾನಸಭೆಯ ಹೊರಗಡೆ ಗುರುಗಳ ಮೂರ್ತಿ ಪ್ರತಿಷ್ಠಾಪಿಸಿ ಎಂದು ಪ್ರಣವಾನಂದ ಶ್ರೀ ಆಗ್ರಹಿಸಿದರು.

ಹೊಸ ಭವಿಷ್ಯ ನುಡಿದ ಪ್ರಣವಾನಂದ ಶ್ರೀ
ಬಿಜೆಪಿ ಸರ್ಕಾರದಲ್ಲಿರುವ ಬ್ರಾಹ್ಮಣ ಶಾಹಿ ನೇತಾರರ ದಾಸರಾಗಿ ನಮ್ಮ ಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಬಿಲ್ಲವ ಸಮುದಾಯದ ವೋಟು ಬೇಕು, ಆದರೆ ಬಿಲ್ಲವರು ಬೇಡವಾದಂತಾಗಿದೆ. ಇದಕ್ಕೆ ಅಂತ್ಯ ಹಾಡದಿದ್ದರೆ ವಿಧಾನಸಭೆಗೆ ಪಾದಯಾತ್ರೆ ನಡೆಸುತ್ತೇವೆ. 2023ರ ಚುನಾವಣೆಯಲ್ಲಿ ಬಿಲ್ಲವ ಈಡಿಗ ಸಮುದಾಯದ ಮುಖ್ಯಮಂತ್ರಿ ಆಡಳಿತಕ್ಕೆ ಬರುತ್ತಾರೆ ಎಂದು ಭವಿಷ್ಯ ನುಡಿದರು.

ಪಾದಯಾತ್ರೆ ಮಾಡುವ ಬಗ್ಗೆ ನಿರ್ಧಾರ
ಸ್ವತಂತ್ರ್ಯ ಭಾರತದಲ್ಲಿ ಹಿಂದುಳಿದ ವರ್ಗದ ಜನ ಅತಂತ್ರರಾಗಿ ಬದುಕುತ್ತಿದ್ದಾರೆ. ಆದ್ದರಿಂದ ನಾನು ಮುಂದಿನ ದಿನಗಳಲ್ಲಿ ವಿಧಾನಸಭೆಗೆ ಪಾದಯಾತ್ರೆ ಮಾಡುವ ಬಗ್ಗೆ 15 ದಿನಗಳಲ್ಲಿ ನಿರ್ಧರಿಸಲಿದ್ದೇನೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಿಲ್ಲವ ಸಂಘಟನೆಗಳ ಮೂಲಕ ಬೃಹತ್ ಹೋರಾಟ ನಡೆಸಲಿದ್ದೇವೆ. ಬಿಲ್ಲವ, ಈಡಿಗ ಸಮುದಾಯದ ಕುಲಕಸುಬು ಶೇಂದಿಯನ್ನು ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯಾದ್ಯಂತ 29 ಜಿಲ್ಲೆಗಳಲ್ಲಿ ಸ್ಥಗಿತಗೊಳಿಸಲಾಗಿದೆ. ನಮ್ಮ ಸಮುದಾಯದಲ್ಲಿ 3 ಸಾವಿರ ಮಂದಿಯಲ್ಲಿ ಬಾರ್ ಪರವಾನಿಗೆ ಇದೆ. 10 ಸಾವಿರ ಪರವಾನಿಗೆ ಬೇರೆ ಸಮುದಾಯದವರಲ್ಲಿದೆ. ಆದ್ದರಿಂದ ರಾಜ್ಯಾದ್ಯಂತ ಬಿಲ್ಲವ, ಈಡಿಗ ಸಮುದಾಯಕ್ಕೆ ಶೇಂದಿ ಇಳಿಸಿ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಬೇಕು. ಆಗದಿದ್ದರೆ ಸರ್ಕಾರ ತಾಕತ್ತಿದ್ದರೆ 13 ಸಾವಿರ ಬಾರ್, ವೈನ್ ಶಾಪ್, ಗುಟ್ಕ ಪಾನ್, ಪಬ್ ಬಂದ್ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸಮುದಾಯಕ್ಕೆ ಹಕ್ಕಿದೆ
2023ರಲ್ಲಿ ರಾಜ್ಯದ ಸಿಎಂ ಬಿಲ್ಲವ, ಈಡಿಗ ಸಮುದಾಯದವರೇ ಆಗಲಿದ್ದಾರೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಈಗಲೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬಿಲ್ಲವ ಸಮುದಾಯಕ್ಕೆ ಹಕ್ಕು ಇದೆ. ಬಿಜೆಪಿ ಸರ್ಕಾರ ಬಿಲ್ಲವ ಸಮುದಾಯಕ್ಕೆ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದೆ. ಇದು ಮುಂದುವರಿದರೆ ಚುನಾವಣೆಯ ಸಂದರ್ಭದಲ್ಲಿ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಪ್ರಣವಾನಂದ ಶ್ರೀ ಎಚ್ಚರಿಸಿದರು.












Click it and Unblock the Notifications