ನೇತ್ರಾವತಿ ತೀರದಲ್ಲೊಂದು ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂಗಮ

ಇತಿಹಾಸ ಪ್ರಸಿದ್ದ ಅಜಿಲಮೊಗರು ಹಾಗೂ ಚಿಂತಾಮಣಿ ನರಸಿಂಹ ದೇವಾಲಯವು ಸೌಹಾರ್ದ ಪ್ರತೀಕವಾಗಿ ನೇತ್ರಾವತಿ ನದಿಯ ಎರಡು ತೀರಗಳ ಮಧ್ಯೆ ನೆಲೆ ನಿಂತಿವೆ. ಇದೇ ಮಾರ್ಚ್ 11, 12, 13 ರಂದು ಅಜಿಲಮೊಗರುವಿನಲ್ಲಿ ' 744 ನೇ ಮಾಲಿದಾ ಉರೂಸ್' ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿ ತೀರದಲ್ಲಿ ಇರುವ ಊರು ಅಜಿಲಮೊಗರು. ಇದು ಧಾರ್ಮಿಕ ಶ್ರದ್ಧಾ ಕೇಂದ್ರಕ್ಕಿರುವ ಇನ್ನೊಂದು ಹೆಸರು.

ಐತಿಹಾಸಿಕ ಅಜಿಲಮೊಗರು ಮಸ್ಜಿದ್ ಎಂದರೆ ಸುತ್ತಮುತ್ತಲಿನ ಊರಿಗೂ ಚಿರಪರಿಚಿತ. ಅದೇ ರೀತಿ ಅದಕ್ಕೆ ಅಭಿಮುಖವಾಗಿ ಕಡೇಶಿವಾಲಯ ದೇವಾಲಯ ಕೂಡ ಇದೆ. ಈ ಎರಡು ಧಾರ್ಮಿಕ ಕೇಂದ್ರಗಳಿಗೆ ಐತಿಹಾಸಿಕ ಹಿನ್ನೆಲೆಯೂ ಇದೆ.

ಸುಮಾರು ೭೦೦ ವರ್ಷಗಳ ಇತಿಹಾಸವಿರುವ ಅಜಿಲಮೊಗರು ಮಸ್ಜಿದ್ ಮಾಲಿದ ಎಂಬ ಧಾರ್ಮಿಕ ಸಂಭ್ರಮಕ್ಕೆ ಹೆಸರಾದ ಹೆಸರು. ಮಾಲಿದಾ ಹರಕೆ ಎಂಬ ಆಚರಣೆ ವರ್ಷಂಪ್ರತಿ ದಿನಗಳಲ್ಲಿ ಇಲ್ಲಿ ನಡೆಯುತ್ತದೆ. ಆವಾಗ ಬೇರೆ ಬೇರೆ ರಾಜ್ಯಗಳಿಂದ ಈ ಮಸೀದಿಗೆ ಭಕ್ತಾದಿಗಳು ಆಗಮಿಸುತ್ತಾರೆ.

special religion place

ನದಿ ತೀರದಲ್ಲಿ ಮಸ್ಜಿದ್ ನಿರ್ಮಾಣಗೊಂಡಿರುವುದಕ್ಕೆ ಒಂದು ಇತಿಹಾಸವಿದೆ. ಇತಿಹಾಸದ ಪುಟಗಳನ್ನು ತಿರುವಿದಾಗ ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ.

ಸುಮಾರು ೭೦೦ ವರ್ಷಗಳ ಇತಿಹಾಸವಿರುವ ಅಜಿಲಮೊಗರು ಮಸ್ಜಿದ್ ಹಾಗೂ ಕಡೇಶಿವಾಲಯ ಚಿಂತಾಮಣಿ ನರಸಿಂಹ ದೇವಾಲಯ ಎಂಬ ಎರಡು ಧಾರ್ಮಿಕ ಕೇಂದ್ರಗಳು ನೇತ್ರಾವತಿ ನದಿಯ ಎರಡು ದಂಡೆಗಳಲ್ಲಿದೆ.

ಇರಾನ್‌ನ ಸಿಸ್ಥಾನ ದೇಶದ ರಾಜ್ಯಾಭಾರ ನಡೆಸುತ್ತಿದ್ದ ಸಯ್ಯಿದ್ ಹುಸೈನ್ ಇಬ್‌ನು ಅಬುಲ್ ಖಾಸಿಮ್ ಎಂಬವರ ಪುತ್ರ ಸಯ್ಯಿದ್ ಬಾಬಾ ಫಕ್ರುದ್ದೀನ್(ನ.ಮ.)ರವರು ಇಲ್ಲಿ ಮಸ್ಜಿದ್ ನಿರ್ಮಿಸಿದರು ಎಂದು ಹೇಳಲಾಗುತ್ತದೆ.

special religion place

೨೫ನೆ ವರ್ಷದಲ್ಲಿ ತಂದೆಯನ್ನು ಆಗಲಿದ ಫಕ್ರುದ್ದೀನ್‌ರವರು ಎಳೆಯ ವಯಸ್ಸಿನಲ್ಲಿಯೇ ರಾಜ್ಯಾಭಾರದ ಜವಾಬ್ದಾರಿಯನ್ನು ಹೊರಬೇಕಾಯಿತು. ೪೦ ವರ್ಷದವರೆಗೂ ರಾಜ್ಯಾಭಾರ ನಡೆಸಿದ ಅವರಿಗೆ, ಕೇವಲ ಸಿಂಹಾಸನದಲ್ಲಿ ಕೂರಿದ ಮಾತ್ರಕ್ಕೆ ಜನರ ಸೇವೆ ನಡೆಸಲು ಹಾಗೂ ಜನರ ಬಳಿಗೆ ತಲುಪಲು ಸಾಧ್ಯವಾಗುವುದಿಲ್ಲ ಎಂಬ ಅರಿವು ಮೂಡಿತು.

ಅಂದಿನಿಂದ ವಿಶ್ವ ಸಂಚಾರ ಆರಂಭಿಸಿದರು. ದಾರಿಯುದ್ದಕ್ಕೂ ಧರ್ಮ ಬೋಧನೆ ನಡೆಸುತ್ತಾ ಸಾಗಿದರು. ಜನರಲ್ಲಿದ್ದ ಅನೀತಿ, ಅಂಧಾಕರ, ಮೂಢನಂಬಿಕೆಗಳನ್ನು ನಿವಾರಿಸಲು ಪ್ರಯತ್ನಿಸಿದರು. ೭ನೆ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟ ಅವರು, ತನ್ನಲ್ಲಿದ್ದ ಜ್ಞಾನವನ್ನು ಧಾರೆಯೆರೆದರು. ಹೀಗೆ ಧರ್ಮ ಪ್ರಚಾರ ನಡೆಸುತ್ತಾ ಅವರು ಬಂದದ್ದು ಅಜಿಲಮೊಗರು ಎಂಬಲ್ಲಿಗೆ . ಸಂಚಾರ ಸೌಕರ್ಯವಿಲ್ಲದ ಅಂದಿನ ಕಾಲದಲ್ಲಿ ಜನರು ಹಸಿವಿನಿಂದ ಬಳಲುತ್ತಿದ್ದರಂತೆ.

ಬರುತ್ತಾ ಬೆಳ್ತಿಗೆ, ತುಪ್ಪ, ಬೆಲ್ಲದಿಂದ ತಯಾರಿಸಿದ ವಿಶಿಷ್ಟ ತಿನಿಸನ್ನು ಅವರು ಈ ಸಂದರ್ಭದಲ್ಲಿ ಸ್ಥಳೀಯ ಜನರಿಗೆ ಪರಿಚಯಿಸಿದರು. ಅದರ ಹೆಸರು ಮಾಲಿದಾ ಎಂಬುದಾಗಿತ್ತು ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಈ ಪ್ರದೇಶದಲ್ಲಿ ಅವರು ಮಸ್ಜಿದನ್ನು ನಿರ್ಮಿಸಿದರು. ಅದಕ್ಕೆ ಇಮಾಮರಾಗಿ ತನ್ನ ಶಿಷ್ಯ ಹಝ್ರತ್ ಝಕರಿಯ್ಯಾ(ನ.ಮ.)ರವರನ್ನು ನಿಯೋಜಿಸಿದರು ಎಂಬುದು ಇತಿಹಾಸ.

special religion place

ಫಕ್ರುದ್ದೀನ್(ನ.ಮ.)ರವರು ಅಜಿಲಮೊಗರುವಿಗೆ ಬಂದ ಸಂದರ್ಭದಲ್ಲಿ ಇಲ್ಲಿ ಜೈನ ರಾಜರು ಇದ್ದರಂತೆ. ಅವರು ಚೆನ್ನಮ್ಮ ರಾಣಿಯ ನಿಕಟವರ್ತಿಗಳಾಗಿದ್ದರು. ಅವರೇ ಇಲ್ಲಿ ಮಸ್ಜಿದ್ ಕಟ್ಟಲು ಸ್ಥಳ ನೀಡಿದರು. ಮಾತ್ರವಲ್ಲ, ಚೆನ್ನಮ್ಮ ರಾಣಿಗೆ ಇಲ್ಲಿನ ಜೈನರಾಜರು ಕಪ್ಪಕಾಣಿಕೆಯನ್ನು ಸಲ್ಲಿಸುತ್ತಿದ್ದರಂತೆ. ಅಜಿಲಮೊಗರು ಮಸ್ಜಿದ್‌ಗೆ ನೇರವಾಗಿ ತೀರದ ಇನ್ನೊಂದು ಬದಿಯಲ್ಲಿ ಲಕ್ಷ್ಮೀನರಸಿಂಹ ಚಿಂತಾಮಣಿ ದೇವಾಲಯ ಇದೆ.

ಒಂದು ಮೂಲದ ಪ್ರಕಾರ, ಫಕ್ರುದ್ದೀನ್(ನ.ಮ.) ಹಾಗೂ ನರಸಿಂಹ ಎಂಬವರು ಈ ಪ್ರದೇಶಕ್ಕೆ ಜೊತೆಯಲ್ಲೇ ಬಂದಿದ್ದರು ಎಂಬ ಪ್ರತೀತಿ ಇದೆ. ನದಿ ದಾಟಲು ನರಸಿಂಹ ಹಿಂಜರಿದ ಕಾರಣ, ತೀರದ ಈ ಬದಿಯಲ್ಲಿ ದೇವಾಲಯ ಹಾಗೂ ತೀರದ ಆಚೆ ಬದಿಯಲ್ಲಿ ಮಸ್ಜಿದ್ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ.

ಹೀಗೆ ಅಜಿಲಮೊಗರು ಎಂಬಲ್ಲಿ ಮಸ್ಜಿದ್ ನಿರ್ಮಿಸಿ ಅದಕ್ಕೆ ಬೇಕಾದ ಸೌಕರ್ಯಗಳನ್ನು ಕಲ್ಪಿಸಿ, ಫಕ್ರುದ್ದೀನ್(ರ.ಅ.)ರವರು ದೇಶ ಸಂಚಾರದಲ್ಲಿ ತೊಡಗಿದರು. ಬಳಿಕ ಇವರು ಆಂಧ್ರದ ಪೆನಗುಂಡ ಎಂಬಲ್ಲಿನ ಕ್ರಿ.ಶ. ೧೨೯೪ರಲ್ಲಿ ಇಹಲೋಕ ತ್ಯಜಿಸಿದರು. ಮೈಸೂರು ಹುಲಿ ಟಿಪ್ಪುಸುಲ್ತಾನ್‌ರವರ ಕಾಲದಲ್ಲಿ ಅಜಿಲಮೊಗರು ಮಸ್ಜಿದ್‌ನ ಜೀರ್ಣೊದ್ದಾರ ಪ್ರಕ್ರಿಯೆ ನಡೆದಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಕನಸಾಗಿ ಉಳಿದ ಸೇತುವೆ ನಿರ್ಮಾಣ: ಅಜಿಲಮೊಗರು-ಕಡೇಶಿವಾಲಯ ನಡುವೆ ಸೇತುವೆ ನಿರ್ಮಾಣದ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈ ಕ್ಷೇತ್ರದಿಂದ ಸ್ಪರ್ಧಿಸುವವರೂ ಪ್ರಚಾರದ ವೇಳೆ ಸೇತುವೆ ನಿರ್ಮಾಣ ಭರವಸೆಯನ್ನು ಕೊಡುತ್ತಲೇ ಬಂದಿದ್ದಾರೆ. ವೀರಪ್ಪ ಮೊಯಿಲಿಯವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಇಲ್ಲಿನ ಸೇತುವೆ ನಿರ್ಮಾಣದ ಬಗ್ಗೆ ಪ್ರಸ್ತಾಪವಾಗಿತ್ತು.

ಅಷ್ಟೇ ಅಲ್ಲ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೂಗು ಸೇತುವೆಗಾಗಿ ೮ ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ನೀಡಿದ್ದ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ಈಗಂತೂ ರಾಜಕಾರಣಿಗಳ ಮೇಲೆ ಜನರು ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿ ಆಯ್ಕೆಯಾದ ಬಳಿಕ ನಳಿನ್ ಕುಮಾರ್ ಕಟೀಲ್ ತನ್ನ ಅಭಿವೃದ್ದಿ ಚಟುವಟಿಕೆಯಲ್ಲಿ ಅಜಿಲಮೊಗರು-ಕಡೇಶಿವಾಲಯ ನಡುವೆ ಸೇತುವೆ ನಿರ್ಮಾಣ ಎಂದಿದ್ದರು. ಇದು ಇನ್ನೂ ಈಡೇರಿಲ್ಲ.

ಅಷ್ಟೇ ಅಲ್ಲ, ಆಗಿನ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಾಗರಾಜ ಶೆಟ್ಟಿಯವರು ಈ ಸೇತುವೆ ನಿರ್ಮಾಣಕ್ಕಾಗಿ ೧೮ ಕೋಟಿ ರೂಪಾಯಿ ವೆಚ್ಚದಲ್ಲಿ ಮಂಜೂರು ಆಗುತ್ತದೆ ಎಂದಿದ್ದರು. ಕೇವಲ ೧೮ ಕೋಟಿ ರೂ. ವೆಚ್ಚದಲ್ಲಿ ಸುಮಾರು ೨ ಕಿ.ಮೀ. ಉದ್ದದ ಸೇತುವೆ ನಿರ್ಮಾಣ ನಿರ್ಮಾಣ ಸಾಧ್ಯವೇ ಎಂಬುದು ಜನರ ಪ್ರಶ್ನೆ.

ಇದೀಗ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಬಹು ಬೇಡಿಕೆಯ, ಮಹತ್ವಾಕಾಂಕ್ಷೆಯ ಅಜಿಲ ಮೊಗರು- ಕಡೇಶಿವಾಲಯ ಸಂಪರ್ಕ ಸೇತುವೆ 31 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಅಜಿಲಮೊಗರು ಮಸ್ಜಿದ್ ಸಮಿತಿಯ ವತಿಯಿಂದ ಅನಾಥ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗಿರುವುದು ಶ್ಲಾಘನೀಯ. ಅನಾಥ ಮಕ್ಕಳಿಗೆ ಎಸೆಸೆಲ್ಸಿ ಯವರೆಗಿನ ಶಿಕ್ಷಣವನ್ನು ಅಜಿಲಮೊಗರು ಮಸ್ಜಿದ್ ವತಿಯಿಂದ ನೀಡಲಾಗುತ್ತಿದೆ.

ಇತಿಹಾಸ ಪ್ರಸಿದ್ದ ಅಜಿಲಮೊಗರು ಹಾಗೂ ಚಿಂತಾಮಣಿ ನರಸಿಂಹ ದೇವಾಲಯವು ಸೌಹಾರ್ದ ಪ್ರತೀಕವಾಗಿ ನೇತ್ರಾವತಿ ನದಿಯ ಎರಡು ತೀರಗಳ ಮಧ್ಯೆ ನೆಲೆ ನಿಂತಿವೆ. ಇದೇ ಮಾರ್ಚ್ 11, 12, 13 ರಂದು ಅಜಿಲಮೊಗರುವಿನಲ್ಲಿ ' 744 ನೇ ಮಾಲಿದಾ ಊರೂಸ್' ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+