Sowjanya murder: ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಹೈಕೋರ್ಟ್ ಆದೇಶ
ಮಂಗಳೂರು, ಸೆಪ್ಟೆಂಬರ್, 01: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಸೌಜ್ಯ ಹತ್ಯೆ ವಿಚಾರವಾಗಿ ಮಹೇಶ್ ಶೆಟ್ಟಿ ತಿಮರೋಡಿ ಹಲವು ಸಭೆ, ಪ್ರತಿಭಟನೆಗಳಲ್ಲಿ ಹೆಗ್ಗಡೆ ಕುಟುಂಬ ಹಾಗೂ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನ ಹೇಳಿಕೆ ನೀಡುತ್ತಲೇ ಬಂದಿದ್ದರು. ಆದರೆ ಇದೀಗ ಹೈಕೋರ್ಟ್ ಅವರಿಗೆ ಅವಹೇಳನಕಾರಿ ಹೇಳಿಕೆ ನೀಡದಂತೆ ಖಡಕ್ ಎಚ್ಚರಿಕೆ ನೀಡಿದೆ. ಅಲ್ಲದೆ ಈ ಬಗ್ಗೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಸರ್ಕಾರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಹೇಶ್ ಶೆಟ್ಟಿ ತಿಮರೋಡಿ ಅವರಿಂದ ನಿಯಮ ಉಲ್ಲಂಘನೆಯಾಗದಂತೆ ಕೋರ್ಟ್ ಆದೇಶ ನೀಡಿದೆ.

ಬಿಜೆಪಿ ಶಾಸಕರ ವಿರುದ್ಧ ವಾಗ್ದಾಳಿ
ಸೌಜನ್ಯ ಹತ್ಯೆ ಪ್ರಕರಣದಲ್ಲಿ ಮರುತನಿಖೆಗಾಗಿ ರಾಜ್ಯ ಸರ್ಕಾರಕ್ಕೆ ಕರಾವಳಿ ಬಿಜೆಪಿ ಶಾಸಕರು ಮನವಿ ಮಾಡಿದ್ದು, ಈ ವಿಚಾರವಾಗಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಬಿಜೆಪಿ ಶಾಸಕರ ವಿರುದ್ಧ ಇತ್ತೀಚೆಗಷ್ಟೇ ವಾಗ್ದಾಳಿ ನಡೆಸಿದ್ದರು.
ಬೆಳ್ತಂಗಡಿ ತಹಶೀಲ್ದಾರ್ ಕಚೇರಿ ಎದುರಲ್ಲಿ ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಸಂತ ಬಂಗೇರ, ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ. ಈಗ ಅವರೇ ಮರುತನಿಖೆ ಮಾಡಬೇಕಾಗಿದೆ. ಬಿಜೆಪಿ ಶಾಸಕ, ಸಂಸದರು ಮೋದಿಯರಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ಮೋದಿಗೆ ಹೇಳುವ ಬದಲು ಸಿದ್ದರಾಮಯ್ಯ ಬಳಿ ನ್ಯಾಯ ಕೇಳುತ್ತಿದ್ದಾರೆ. ಇವರಿಗೆ ಧೈರ್ಯ ಇಲ್ಲದಿದ್ದರೆ ನಾನು ಇವರನ್ನು ಮೋದಿಯವರ ಬಳಿ ಕರೆದುಕೊಂಡು ಹೋಗಿ 3 ಬಾರಿ ಎಂಪಿ ಆಗಿದ್ದವರೆಂದು ಪರಿಚಯ ಮಾಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದ್ದರು.
ಎಂದೂ ಓದದ ಮಾಣಿ ಅಮಾವಾಸ್ಯೆ ದಿನ ಓದಿದ ಎನ್ನುವಂತೆ ಬಿಜೆಪಿಯವರು ಭಾನುವಾರ ಇಲ್ಲಿ ಪ್ರತಿಭಟನೆ ಮಾಡಿದರು. ತಹಶೀಲ್ದಾರ್ ಕಚೇರಿಗೆ ಬೀಗ ಹಾಕಿರುವಾಗ ಇವರು ಪ್ರತಿಭಟನೆಯ ನಾಟಕ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಈಗ ನೆನಪು ಬಂದಿದೆ. 14 ವರ್ಷಗಳಿಂದ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಈವರೆಗೆ ಸೌಜನ್ಯಾ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕೊಲೆಯಾಗಿ 11 ವರ್ಷಗಳಾಗಿದ್ದು ಸೌಜನ್ಯಾ ಪರ ಸಂಸತ್ತಿನಲ್ಲಿ ಧ್ವನಿ ಎತ್ತಲು ಆಗಲಿಲ್ಲ ಯಾಕೆ? ಮುರುಗನ್ ಎಂಬ ಒಳ್ಳೆಯ ಸಿಬಿಐ ಅಧಿಕಾರಿ ತನಿಖೆ ಮಾಡುತ್ತಿದ್ದಾಗ ಅವರನ್ನು ಬದಲಾವಣೆ ಮಾಡಿದರು. ಮೋದಿ ಸರ್ಕಾರ ಇದ್ದಾಗಲೇ ಅಧಿಕಾರಿಯನ್ನು ಬದಲಿಸಿ ತನಿಖೆಯ ದಿಕ್ಕು ತಪ್ಪಿಸಿದ್ದು ಯಾರು? ಹಾಗಾದರೆ ಸೌಜನ್ಯಾ ತನಿಖೆಯನ್ನು ದಿಕ್ಕು ತಪ್ಪಿಸಿದ್ದು ಯಾರು? ಇದಕ್ಕೆ ಕಾರಣಕರ್ತರು ಯಾರು? ಎಂದು ವಸಂತ ಬಂಗೇರ ಪ್ರಶ್ನಿಸಿದ್ದರು.
ನನ್ನನ್ನು ಸೌಜನ್ಯಾ ಪ್ರಕರಣದಲ್ಲಿ ಅಪರಾಧಿ ಅಂತೀರಲ್ಲ ಸುನೀಲ್ ಕುಮಾರ್ ತಾಕತ್ತು ಇದ್ದರೆ ಮೋದಿಗೆ ಹೇಳಿ ನನ್ನನ್ನು ಸಿಬಿಐನಿಂದ ಬಂಧಿಸಿ. ಇದೇ ಸುನೀಲ್ ಕುಮಾರ್ ಕಾರ್ಕಳದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದಾಗ ಸುಚಿತ್ರಾ ಶೆಟ್ಟಿ ಕೊಲೆಯಾದಾಗ, ನ್ಯಾಯ ಕೊಡಿಸುತ್ತೇನೆಂದು ವೋಟು ಕೇಳಿದ್ದರು. ಹಾಗಾದರೆ ಇದುವರೆಗೂ ಯಾಕೆ ನ್ಯಾಯ ಕೊಡಿಸಿಲ್ಲ ನೀವು. ಹಾಗೆಯೇ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜನಿಗೆ 5 ವರ್ಷ ಸೌಜನ್ಯಾ ನೆನಪಾಗಿಲ್ಲ ಎಂದು ಕಿಡಿಕಾರಿದ್ದರು.
40 ಪರ್ಸೆಂಟ್ ಕೊಳ್ಳೆ ಹೊಡೆದ ರಾಜ್ಯದ ಏಕೈಕ ಶಾಸಕ ಹರೀಶ್ ಪೂಂಜ ಈಗ ಸೌಜನ್ಯಾ ಪರ ನ್ಯಾಯ ಕೇಳುತ್ತಿದ್ದಾರೆ. ಇವರೆಲ್ಲ ಸೇರಿ ನನಗೆ ರಕ್ಷಣೆ ಕೊಡಲು ಬಂದಿದ್ದಾರೆ, ನನಗೆ ದೇವರಿದ್ದಾನೆ. ಇವರ ಭದ್ರತೆ ಬೇಕಿಲ್ಲ. ಇವರಿಗೆ ಯಾವ ಯೋಗ್ಯತೆ ಇದೆ. ಜನರನ್ನು ಮೋಸ ಮಾಡಿ ಗೆದ್ದವರು ಇವರು. ನನಗೀಗ 78 ವರ್ಷ, ಇವರೆಲ್ಲ ರಾಜಕೀಯದ ಪಾಠ ನನ್ನಿಂದ ಕಲಿಯಬೇಕಾಗಿದೆ ಎಂದು ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಭಟನಾ ಸಭೆಯಲ್ಲಿ ಎಡಪಂಥೀಯ ಚಿಂತಕರಾದ ಗುಲ್ಬರ್ಗ ಮೂಲದ ಕೆ.ನೀಲಾ, ಡಾ. ಮೀನಾಕ್ಷಿ ಬಾಲಿ, ಮಲ್ಲಿಗೆ ಸಿರಿಮನೆ, ನಾಟಕಕಾರ ಜೆನ್ನಿ, ರವಿಕರಣ ಪುಣಚ, ಬಿ.ಎಂ. ಭಟ್, ವಿಷ್ಣುಮೂರ್ತಿ ಭಟ್, ಯಾದವ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ನರೇಂದ್ರ ನಾಯಕ್, ಒಡನಾಡಿ ಸ್ಟಾನ್ಲಿ, ಜಯನ್ ಮಲ್ಪೆ ಮತ್ತಿತರರು ಇದ್ದರು.












Click it and Unblock the Notifications