ಸೌಜನ್ಯ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಅಣ್ಣಪ್ಪ ಸ್ವಾಮಿ ಮುಂದೆ ಎರಡೂ ಕಡೆಯವರಿಂದ ಪ್ರಾರ್ಥನೆ
ಮಂಗಳೂರು, ಆಗಸ್ಟ್ 27: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಸಂಭಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಢೀರ್ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸೌಜನ್ಯ ತಾಯಿ ಮತ್ತು ಸೌಜನ್ಯ ತಾಯಿ ಆರೋಪಿಸಿರುವ ಮೂರು ಮಂದಿ ಯುವಕರು ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಆಣೆ ಪ್ರಮಾಣ ಮಾಡಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಸಮ್ಮುಖದಲ್ಲಿ ಹನ್ನೊಂದು ವರ್ಷಗಳ ವಾದ-ಪ್ರತಿವಾದವನ್ನು ಅಣ್ಣಪ್ಪ ಸ್ವಾಮಿಯ ಮಡಿಲಿಗೆ ಸಲ್ಲಿಸಲಾಗಿದೆ. ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಮತ್ತೊಂದು ಹಂತ ತಲುಪಿದೆ. ನ್ಯಾಯ ಹೋರಾಟದ ನಡುವೆಯೇ ಪ್ರಕರಣವನ್ನು ನೀನೆ ಇತ್ಯರ್ಥ ಮಾಡುವಂತೆ ಸೌಜನ್ಯ ತಾಯಿ ಕುಸುಮಾವತಿ ಅಣ್ಣಪ್ಪ ಸ್ವಾಮಿಯ ಮೊರೆ ಹೋಗಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗಳದ ಕಾರ್ಯಕರ್ತರು ನೇತ್ರಾವತಿಯಿಂದ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದವರೆಗೆ ಪಾದಯಾತ್ರೆ ಮಾಡಿದ್ದಾರೆ. ಈ ಪಾದಾಯಾತ್ರೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿಯೂ ಭಾಗವಹಿಸಿದ್ದರು. ಆದರೆ ಕುಸುಮಾವತಿ ಬರೋದನ್ನು ವಿರೋಧಿಸಿ ಧರ್ಮಸ್ಥಳದ ಗ್ರಾಮಸ್ಥರು ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಸೇರಿದ್ದರು. ಈ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಜನರನ್ನು ನಿಯಂತ್ರಿಸಿದ್ದಾರೆ. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಎಸ್ಪಿ ರಿಷ್ಯಂತ್ ಸಿ.ಬಿ ಜೊತೆ ಧರ್ಮಸ್ಥಳದ ಪ್ರಮುಖರು ವಾಗ್ವಾದ ನಡೆಸಿದ್ದಾರೆ.
ವಿರೋಧದ ನಡುವೆಯೇ ನೇತ್ರಾವತಿಯಿಂದ ಧರ್ಮಸ್ಥಳ ಪ್ರಮುಖ ದ್ವಾರದ ತನಕ ಸೌಜನ್ಯ ತಾಯಿ ಕುಸುಮಾವತಿ ಕಾರ್ಯಕರ್ತರೊಡನೆ ಆಗಮಿಸಿದ್ದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದಿದ್ದು, ಸೌಜನ್ಯ ತಾಯಿ ಸೇರಿದಂತೆ ಕೇವಲ ಐದು ಮಂದಿ ಪ್ರಮುಖರನ್ನು ಮಾತ್ರ ಅಣ್ಣಪ್ಪ ಸ್ವಾಮಿ ಬೆಟ್ಟದ ತನಕ ಹೋಗಲು ಅವಕಾಶ ನೀಡಿದ್ದಾರೆ.
ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಸೌಜನ್ಯ ತಾಯಿ ಕುಸುಮಾವತಿ ಕಣ್ಣೀರಿಟ್ಟಿದ್ದಾರೆ. ಮುಷ್ಠಿ ಕಾಣಿಕೆಯನ್ನು ಅಣ್ಣಪ್ಪ ಸ್ವಾಮಿಯ ಕಾಣಿಕೆ ಡಬ್ಬಿಗೆ ಹಾಕಿ ನ್ಯಾಯ ಕೊಡುವಂತೆ ಮೊರೆ ಹೋಗಿದ್ದಾರೆ. ಸೌಜನ್ಯ ತಾಯಿಯ ಬಳಿಕ ಆರೋಪಿತರಾಗಿದ್ದ ಮಲ್ಲಿಕ್ ಜೈನ್, ಉದಯ್ ಜೈನ್, ಮತ್ತು ಧೀರಜ್ ಕೆಲ್ಲ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬಂದು ಈ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ. ನಾವು ನ್ಯಾಯಾಂಗದ ಎಲ್ಲಾ ತನಿಖೆಗೆ ಒಳಪಟ್ಟಿದ್ದೇವೆ. ಮುಂದೆಯೂ ಎಲ್ಲಾ ತನಿಖೆಗೆ ಒಳಗಾಗುತ್ತೇವೆ. ನಮ್ಮ ಮೇಲೆ ಅಪಪ್ರಚಾರ ಮಾಡಿದ ಎಲ್ಲರಿಗೂ ದೇವರು ಶಿಕ್ಷೆ ನೀಡಲು ಎಂದು ಪ್ರಾರ್ಥನೆ ಮಾಡಿದ್ದಾರೆ.

ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಮಾಡಬೇಕೆಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಬೆಳ್ತಂಗಡಿ ತಾಲೂಕು ಪಂಚಾಯತ್ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರ ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸೌಜನ್ಯ ತಾಯಿ ಕುಸುಮಾವತಿ, 'ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ನಂಬಿಕೆ ಇದೆ. ಸಂಸದರು ನಮ್ಮನ್ನು ಮೋದಿ ಬಳಿ ಕರೆದುಕೊಂಡು ಹೋಗಬೇಕು. ಹನ್ನೊಂದು ವರ್ಷದ ಬಳಿಕವಾದರೂ ನಮ್ಮ ಮಗಳಿಗೆ ನ್ಯಾಯ ಸಿಗಬೇಕು. ನಾನು ಆರೋಪಿಸಿದವರ ವಿರುದ್ಧ ತನಿಖೆ ಮಾಡಬೇಕೆಂದು' ಆಗ್ರಹಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, 'ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕೆಂಬ ಕೂಗು ಈಗ ಇಡೀ ರಾಜ್ಯದಲ್ಲಿ ಎದ್ದಿದೆ. ಕೆಲವೇ ದಿನದಲ್ಲಿ ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರು ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಮರುತನಿಖೆಗೆ ಒತ್ತಾಯ ಮಾಡೋದಾಗಿ' ಹೇಳಿದರು.
ಒಟ್ಟಿನಲ್ಲಿ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯ ಜೋರಾಗಿದೆ. ನ್ಯಾಯಕ್ಕಾಗಿ ನ್ಯಾಯಾಂಗದ ಜೊತೆಗೆ ದೈವತ್ವಕ್ಕೂ ಜನ ಮೊರೆ ಹೋಗಿದ್ದು, ಸತ್ಯ, ನ್ಯಾಯ, ಧರ್ಮಕ್ಕೆ ಹೆಸರು ವಾಸಿಯಾಗಿರುವ ಅಣ್ಣಪ್ಪ ಸೌಜನ್ಯನಿಗೆ ನ್ಯಾಯ ನೀಡಲಿ ಎನ್ನುವುದು ಎಲ್ಲರ ಪ್ರಾರ್ಥನೆಯಾಗಿದೆ.












Click it and Unblock the Notifications