ಮಂಗಳೂರು: ರಿವಾಲ್ವರ್ ಗುರಿ ಕೆಲಸದಾಳುವಿಗೆ; ಸಿಡಿದ ಗುಂಡು ಹೊಕ್ಕಿದ್ದು ಮಗನ ತಲೆಗೆ!
ಮಂಗಳೂರು, ಅಕ್ಟೋಬರ್ 5: ಕೆಲಸದಾಳುವಿನತ್ತ ಗುರಿ ಮಾಡಿ ಹೊಡೆದ ಉದ್ಯಮಿಯ ಪಿಸ್ತೂಲ್ ಗುಂಡು, ಗುರಿ ತಪ್ಪಿ ತನ್ನ ಮಗನ ತಲೆಗೆ ಬಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿಯ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೋ ಪ್ರೈ. ಲಿಮಿಟೆಟ್ ಕಂಪೆನಿಯ ಮಾಲೀಕ ರಾಜೇಶ್ ಪ್ರಭು, ತನ್ನ ಕೆಲಸದಾಳುಗಳ ಜೊತೆಗೆ ಸಂಬಳದ ವಿಚಾರದಲ್ಲಿ ಜಟಾಪಟಿಗೆ ಇಳಿದಿದ್ದು, ಈ ವೇಳೆ ರಾಜೇಶ್ ಕೈಯಲ್ಲಿದ್ದ ಪಿಸ್ತೂಲ್‌ನಿಂದ ಸಿಡಿದ ಗುಂಡು ಸ್ವಲ್ಪ ದೂರದಲ್ಲಿ ಕೂತಿದ್ದ ಮಗನ ತಲೆಗೆ ತಾಗಿದ ಘಟನೆ ನಡೆದಿದೆ.
ಮಂಗಳವಾರ ಸಂಜೆ ಮೋರ್ಗನ್ ಗೇಟ್ಸ್ ರೈಲ್ವೇ ಹಳಿಯ ಬಳಿ ಇರುವ ರಾಜೇಶ್ ಪ್ರಭು ಮಾಲೀಕತ್ವದ ವೈಷ್ಣವು ಎಕ್ಸ್‌ಪ್ರೆಸ್ ಕಾರ್ಗೋ ಪ್ರೈ.ಲಿ. ಕಚೇರಿ ಬಳಿ ಘಟನೆ ನಡೆದಿದೆ. ರಾಜೇಶ್ ಪ್ರಭು ಲಾಜಿಸ್ಟಿಕ್ಸ್ ವ್ಯವಹಾರ ನಡೆಸುತ್ತಿದ್ದು, ಕಚೇರಿಗೆ ಕೆಲಸಗಾರರಾದ ಅಶ್ರಫ್ ಮತ್ತು ಚಂದ್ರು ಆಗಮಿಸಿದ್ದರು.

ಅಶ್ರಫ್ ಮತ್ತು ಚಂದ್ರು ಕೆಲ ದಿನಗಳ ಹಿಂದೆ ರಾಜೇಶ್ ಪ್ರಭುವಿನ ಜೊತೆಗೆ ಮನಸ್ತಾಪವಾಗಿ ಕೆಲಸ ಬಿಟ್ಟಿದ್ದರು. ಆದರೆ ರಾಜೇಶ್ ಪ್ರಭು ಇವರಿಗೆ ಕೊಡಬೇಕಾದ ಸಂಬಳವನ್ನು ಉಳಿಸಿಕೊಂಡಿದ್ದ. ಹೀಗಾಗಿ ತಮಗೆ ಬಾಕಿ ಸಂಬಳವನ್ನು ಕೇಳುವುದಕ್ಕೆ ಅಶ್ರಫ್ ಮತ್ತು ಚಂದ್ರು ರಾಜೇಶ್ ಪ್ರಭು ಕಚೇರಿಗೆ ಬಂದಿದ್ದಾರೆ.
ಮೊದಲು ಸಮಾಧಾನದಿಂದಲೇ ಮೂವರ ನಡುವೆ ಮಾತುಕತೆಯಾಗಿದೆ. ಉಳಿದ ಸಂಬಳವನ್ನು ಕೊಡಲ್ಲ ಅಂತಾ ರಾಜೇಶ್ ಪ್ರಭು ಪಟ್ಟು ಹಿಡಿದರೆ, ಸಂಬಳ ಕೊಡಲೇಬೇಕು ಎಂದು ಅಶ್ರಫ್ ಮತ್ತು ಚಂದ್ರು ಹಠ ಹಿಡಿದಿದ್ದರು.

ಈ ವೇಳೆ ಮೂವರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದಿದೆ. ಹೊಡೆದಾಟಕ್ಕೆ ಮುಂದಾದ ಸಂದರ್ಭದಲ್ಲಿ ರಾಜೇಶ್ ಪ್ರಭು ತನ್ನಲ್ಲಿದ್ದ ರಿವಾಲ್ವರ್‌ನ್ನು ಕೆಲಸಗಾರರತ್ತ ಗುರಿ ಮಾಡಿದ್ದಾರೆ. ಈ ವೇಳೆ ಕೆಲಸಗಾರರು ತಳ್ಳಾಡಿಕೊಂಡಿದ್ದು, ರಾಜೇಶ್ ಪ್ರಭು ಕೈಯಲ್ಲಿದ್ದ ರಿವಾಲ್ವರ್‌ನಿಂದ ಎರಡು ರೌಂಡ್ ಗುಂಡು ಸಿಡಿದಿದೆ.
ಗುಂಡು ನೇರವಾಗಿ ಕಚೇರಿಯ ಮುಂಭಾಗದ ಅಶ್ವಥಕಟ್ಟೆಯಲ್ಲಿ ಕೂತಿದ್ದ ರಾಜೇಶ್ ಪ್ರಭು ಮಗ ಸುಧೀಂದ್ರ ತಲೆಯನ್ನು ಸವರಿಕೊಂಡು ಹೋಗಿದೆ. ಸುಧೀಂದ್ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದು, ಅಶ್ವಥಮರ ಕಟ್ಟೆಯಲ್ಲಿ ಯಾವ ಅರಿವೂ ಇಲ್ಲದೇ ಕೂತಿದ್ದ. ಏಕಾಏಕಿ ಸಿಡಿದ ಗುಂಡು ಸುಧೀಂದ್ರ ತಲೆಯೊಳಗೆ ಎಂಟು ಇಂಚು ಹೊಕ್ಕಿದೆ. ಎಡಕಣ್ಣಿನ ಭಾಗದಿಂದ ತಲೆಯ ಒಳಗೆ ಹೊಕ್ಕ ಗುಂಡು ಎಂಟು ಇಂಚು ತಲೆಯ ಒಳಭಾಗಕ್ಕೆ ಹೋಗಿದೆ.

ತಕ್ಷಣ ನೆಲಕ್ಕುರುಳಿದ ಸುಧೀಂದ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಸ್ಪತ್ರೆಯ ಮೂಲಗಳ ಮಾಹಿತಿಯ ಪ್ರಕಾರ ಸುಧೀಂದ್ರ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಮೀಷನರ್, "ಪ್ರಕರಣದ ಕುರಿತು ಪಾಂಡೇಶ್ವರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಮೂರು ಆಯಾಮಗಳ ಮಾಹಿತಿ ಕಲೆ ಹಾಕಿದ್ದೇವೆ. ಹೊರಗಿನಿಂದ ಬಂದವರು ಶೂಟ್ ಮಾಡಿರುವ ಸಾಧ್ಯತೆಗಳಿವೆಯಾ, ತಂದೆಯಿಂದ ಮಿಸ್ ಫೈರ್ ಆಗಿರುವ ಸಾಧ್ಯತೆಗಳಿವೆಯಾ. ಕೆಲಸಗಾರರು ಶೂಟ್ ಮಾಡಿರುವ ಸಾಧ್ಯತೆಗಳಿವೆಯಾ ಎಂಬ ಬಗ್ಗೆ ಸ್ಥಳೀಯ ಸಿಸಿ ಕ್ಯಾಮೆರಾ ಮತ್ತು ಕಚೇರಿ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಸಂಗ್ರಹಿಸಿ ತನಿಖೆ ನಡೆಸುವುದಾಗಿ," ಹೇಳಿದ್ದಾರೆ.
ಸ್ಥಳೀಯರ ಪ್ರಕಾರ ರಾಜೇಶ್ ಪ್ರಭು ಸಿಡುಕು ಸ್ವಭಾವದ ವ್ಯಕ್ತಿಯಾಗಿದ್ದಾರೆ. ಕೆಲಸಗಾರರ ಜೊತೆ ಆಗಾಗ ಜಗಳ ಕಾಯ್ದುಕೊಂಡಿರುತ್ತಾರೆ. ಇದೀಗ ಕೋಪಕ್ಕೆ ಮಗನ ಪ್ರಾಣಕ್ಕೇ ಕುತ್ತು ಬಂದಿರುವುದು ದುರಂತ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications