ಕಾಂತಾರ ಚಿತ್ರದಲ್ಲಿ ಬಳಕೆಯಾದ ಹದಿನಾರು ವರ್ಷದ ಹಿಂದಿನ ತುಳು ಆಲ್ಬಮ್ ಸಾಂಗ್!
ಮಂಗಳೂರು, ಅಕ್ಟೋಬರ್ 10: ಭಾರತೀಯ ಚಿತ್ರರಂಗದಲ್ಲಿ ಕಾಂತಾರ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ತುಳುನಾಡಿನ ದೈವಾರಾಧನೆ ಕುರಿತು ಮಾಡಿದ ಚಿತ್ರ ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ತುಳು ನಾಡಿನ ದೈವದ ಕುರಿತ ಸಿನಿಮಾವಾದರೂ ರಿಷಭ್ ಶೆಟ್ಟಿ ಅಭಿನಯ ದೇಶಾದ್ಯಂತ ಸಿನಿಪ್ರಿಯರ ಮನಸ್ಸನ್ನು ಗೆದ್ದಿದೆ.
ತುಳುನಾಡಿನ ಜನರ ನಂಬುಗೆಯ ಪಂಜುರ್ಲಿ ದೈವದ ಮಹಿಮೆಯನ್ನು ಸಾರುವ ಚಿತ್ರ ದೈವಾರಾಧಕರ ಮನಸ್ಸನ್ನು ಗೆದ್ದರೆ, ದೈವಾರಾಧನೆಗೆ ಎಳ್ಳಷ್ಟೂ ಚ್ಯುತಿ ಬಾರದಂತೆ ಚಿತ್ರ ಮೂಡಿಬಂದಿದೆ. ಕಾಂತಾರಾ ಚಿತ್ರದಲ್ಲಿ ನಟನೆ ಮಾಡಿದ ಎಲ್ಲಾ ಕಲಾವಿದರಿಗೂ ಕಾಂತಾರ ಹೆಮ್ಮೆ ತಂದರೆ, ಕಾಂತಾರಾ ಚಿತ್ರದಲ್ಲಿ ಹದಿನಾರು ವರ್ಷದ ಹಿಂದಿನ ತುಳು ಆಲ್ಬಮ್ ಸಾಂಗ್‌ಅನ್ನು ಬಳಸಲಾಗಿದೆ. ದೈವಾರಾಧನೆಗೆ ಸಂಬಂಧಿಸಿದ ವಾ ಪೊರ್ಲುಯಾ (ಏನು ಚಂದವೋ) ಎಂಬ ತುಳು ಹಾಡನ್ನು ಕಾಂತಾರಾ ಚಿತ್ರದಲ್ಲಿ ಬಳಕೆ ಮಾಡಲಾಗಿದೆ.
ಕಾಂತಾರಾ: ದೈವಾರಾಧನೆಗೆ ಚ್ಯುತಿ ಬರದಂತೆ ದೈವನರ್ತಕನ ಸಹಾಯ ಪಡೆದಿದ್ದ ರಿಷಬ್ ಶೆಟ್ಟಿ
ತುಳು ಜನಪದೀಯ ಹಾಡುಗಾರ ಮೈಮ್ ರಾಮ್ ದಾಸ್ ಹಾಡಿರುವ ಹಾಡು ಯಥಾವತ್ತಾಗಿ ಕಾಂತಾರಾ ಚಿತ್ರದಲ್ಲಿ ಬಳಕೆಯಾಗಿದೆ. ಭಂಡಾರದ ಮನೆಯಲ್ಲಿ ದೈವದ ಕೋಲ ಆಗುವ ಸಂದರ್ಭದಲ್ಲಿ ಈ ಹಾಡನ್ನು ಬಳಸಲಾಗಿದೆ. ಈ ಹಾಡನ್ನು ಹದಿನಾರು ವರ್ಷಗಳ ಹಿಂದೆ ದೀಪನಲಿಕೆ ಎಂಬ ಆಲ್ಬಮ್ ಸಾಂಗ್‌ನಲ್ಲಿ ರಚಿಸಲಾಗಿತ್ತು.

ಬೇರೆ ಸಿನಿಮಾ, ನಾಟಕಗಳಿಂದಲೂ ಆಫರ್
ವಾ ಪೊರ್ಲುಯಾ ಹಾಡು ಬಳಕೆ ಬಗ್ಗೆ ಗಾಯಕ ಮೈಮ್ ರಾಮ್ ದಾಸ್ ಖುಷಿ ವ್ಯಕ್ತಪಡಿಸಿದ್ದಾರೆ. ಈ ಹಾಡು ದೈವಾರಾಧನೆಗೆ ಸಂಬಂಧಿಸಿದ ಹಾಡಾಗಿದೆ. ಸಾಹಿತ್ಯ, ರಾಗವೂ ಅದೇ ಮಾದರಿಯಲ್ಲಿದೆ. ದೈವಾರಾಧನೆಯಲ್ಲಿ ಬಳಸುವ ವಾದ್ಯ, ತಾಸೆಯನ್ನು ಈ ಹಾಡಲ್ಲಿ ಬಳಕೆಯಾಗಿದೆ. ಈ ಹಿಂದೆಯೇ ಈ ಹಾಡನ್ನು ಬಳಸಲು ಮತ್ತು ಮಾರ್ಪಾಟು ಮಾಡಿ ಹಾಡಲು ಬೇರೆ ಬೇರೆ ನಾಟಕಗಳಿಂದ, ಸಿನಿಮಾಗಳಿಂದ ಆಫರ್ ಬಂದಿತ್ತು. ಆದರೆ ಹಾಡಿರಲಿಲ್ಲ. ಆದರೆ ರಿಷಬ್ ಶೆಟ್ಟಿ ಬಂದು ಕೇಳಿದಾಗ ಆಗಲ್ಲ ಎಂದು ಹೇಳಲು ಸಾಧ್ಯವಾಗಿಲ್ಲ ಎಂದು ಮೈಮ್ ರಾಮ್ ದಾಸ್ ಹೇಳಿದ್ದಾರೆ.

ವಾ ಪೊರ್ಲುಯಾ ಸೆಲೆಕ್ಟ್ ಮಾಡಿದ್ದು ಅಜನೀಶ್
ಲಾಕ್ ಡೌನ್ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಕಾಂತಾರಾದ ಕಥೆ ಹೇಳಿ, ಈ ಚಿತ್ರಕ್ಕೆ ಜನಪದೀಯ ಸಂಗೀತದ ಸಹಾಯ ಕೇಳಿದರು. ಆ ಬಳಿಕ ಸಂಗೀತ ನಿರ್ದೇಶಕ ಅಜನೀಶ್ ಲೋಕೇಶ್ ಮುಂದೆ ಹಲವು ತುಳು ಹಾಡು, ಪಾಡ್ದನ, ಉರಲ್ ಹಾಡುಗಳನ್ನು ಹಾಡಿದೆ. ವಾ ಪೊರ್ಲುಯಾ ಹಾಡಿದಾಗ ಅಜನೀಶ್ ಅವರಿಗೆ ಹಾಡು ಇಷ್ಟವಾಗಿ, ಚಿತ್ರದಲ್ಲಿ ಬಳಸಿದರು ಎಂದು ಮೈಮ್ ರಾಮ್ ದಾಸ್ ಹೇಳಿದ್ದಾರೆ.

ಶತಮಾನದ ಹಾಡು
ಜನಪದೀಯ ಹಿನ್ನಲೆಯುಳ್ಳ ವಾ ಪೊರ್ಲುಯಾ ಹಾಡು ದೈವಾರಾಧನೆಯನ್ನು, ದೈವವನ್ನು ಖುಷಿಯಿಂದ ಹೊಗಳಿ ಗೌರವಿಸುವ ಹಾಡು. ಈ ಹಾಡಿಗೆ ಕಾಪಿರೈಟ್ ಹಾಕಿಲ್ಲ.ಈ ಹಾಡಿಗೆ ಶಶಿ ರಾಜ್ ಕಾವೂರು ಅವರ ಸಾಹಿತ್ಯವಿದೆ. ಹದಿನಾರು ವರ್ಷ ಹಾಡು, ಆದರೆ ಹಾಡು ಹಳೆಯದಾಗಿಲ್ಲ. ನನ್ನ ಗುರು ಭಾಸ್ಕರ್ ನೆಲ್ಲಿತೀರ್ಥ ಹೇಳಿದಂತೆ ವಾ ಪೊರ್ಲುಯಾ ಹಾಡು ಶತಮಾನದ ಹಾಡಾಗಿದೆ. ಕನ್ನಡ ಚಿತ್ರದಲ್ಲಿ ತುಳು ಹಾಡು ಬಳಕೆಯಾಗಿರೋದು ಖುಷಿ ತಂದಿದೆ ಎಂದು ಮೈಮ್ ರಾಮ್ ದಾಸ್ ಹೇಳಿದ್ದಾರೆ.

ಬೇರೆ ಭಾಷೆಗಳಿಗೂ ಡಬ್ ಹಾಗುತ್ತಿರುವ
ಕಾಂತಾರ ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆಯಿಂದ ಕೂಡಿದೆ. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಲಾಗಿದೆ. ಕಥೆಗೆ ತಕ್ಕಂತೆ ಎಲ್ಲಾ ನಟರು ಅದ್ಭುತವಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಯಶಸ್ವಿಯಾದ ಬೆನ್ನಲ್ಲೆ ತಮಿಳು, ಮಲೆಯಾಳಂ, ತೆಲುಗು ಹಾಗೂ ಹಿಂದಿ ಭಾಷೆಗೂ ಡಬ್ ಆಗುತ್ತಿದೆ. ಈಗಾಗಲೇ ಟ್ರೈಲರ್ ಕೂಡ ಬಿಡುಗಡೆಯಾಗಿದೆ.