ಹೋಳಿ ಆಚರಣೆಗೆ ಅಡ್ಡಿಪಡಿಸಿದ ಬಜರಂಗದಳದ ಸದಸ್ಯರ ಬಂಧನ: ಮಂಗಳೂರು ಪೊಲೀಸರು
ಬೆಂಗಳೂರು, ಮಾರ್ಚ್. 27: ಭಾನುವಾರ ಹೋಳಿ ಆಚರಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಬಜರಂಗದಳದ ಆರು ಸದಸ್ಯರನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮರೋಳಿಯಲ್ಲಿ ಭಾನುವಾರ 'ರಂಗ್ ದೇ ಬರ್ಸಾ' ಎಂಬ ಹೆಸರಿನಲ್ಲಿ ಹೋಳಿ ಪಾರ್ಟಿ ಆಯೋಜಿಸಲಾಗಿತ್ತು.
ರಂಗ್ ದೇ ಬರ್ಸಾ ಸಂಘಟಕರು ಡಿಜೆ ಸೌಂಡ್ ಪಾರ್ಟಿ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಯುವಕ ಮತ್ತು ಯುವತಿಯರು ಪ್ರವೇಶ ಶುಲ್ಕವನ್ನು ಪಾವತಿಸುವ ಮೂಲಕ ಭಾಗವಹಿಸಿದ್ದರು. ಸಾರ್ವಜನಿಕ ಶಾಂತಿ ಕದಡಿದೆ ಎಂದು ಆರೋಪಿಸಿ ನೆರೆಹೊರೆಯವರು ಸಮೀಪದ ಕಂಕನಾಡಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ನುಗ್ಗಿ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಸಂಘಟಕರನ್ನು ತಡೆಯಲು ಮುಂದಾದಾಗ ಸಂಘಟನೆಯ ಸದಸ್ಯರು ಹಲ್ಲೆಗೆ ಯತ್ನಿಸಿದ್ದಾರೆ. ಪಾರ್ಟಿಯಲ್ಲಿ ಇತರ ಸಮುದಾಯದ ಯುವಕರು ಮತ್ತು ಹಿಂದೂ ಯುವತಿಯರು ಭಾಗವಹಿಸಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ.
"ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಾ ಅಶ್ಲೀಲವಾಗಿ ವರ್ತಿಸುತ್ತಿದ್ದರು. ಯುವತಿಯರು ಬೇರೆ ಸಮುದಾಯದ ಯುವಕರೊಂದಿಗೆ ಹೋಳಿ ಆಚರಿಸುವುದು ಸರಿಯಲ್ಲ ಎಂದು ಆರೋಪಿಸಿ ಸದಸ್ಯರು ಎಲ್ಲಾ ಉಪಕರಣಗಳು ಮತ್ತು ಅಲಂಕಾರಗಳನ್ನು ಕಿತ್ತು ಹಾಕಿದರು" ಎಂದು ಬಜರಂಗದಳದ ಸದಸ್ಯರೊಬ್ಬರು ಹೇಳಿದ್ದಾರೆ. ಆದರೆ, ಸಂಘಟಕರು ಆರೋಪವನ್ನು ನಿರಾಕರಿಸಿದ್ದಾರೆ.

"ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯು ಮರೋಲಿಯ ಸಾರ್ವಜನಿಕ ಮೈದಾನದಲ್ಲಿ ರಂಗ್ ದೇ ಬುರ್ಸಾ ಹೆಸರಿನಲ್ಲಿ ಹೋಳಿ ಆಚರಣೆಯನ್ನು ಆಯೋಜಿಸಿತ್ತು. ಬ್ಯಾನರ್, ಫ್ಲೆಕ್ಸ್‌ಗಳ ಮೂಲಕವೂ ಪ್ರಚಾರ ಮಾಡಲಾಗಿತ್ತು. ಆದರೆ ಯಾವುದೇ ಅಧಿಕಾರಿಗಳು ಪಾರ್ಟಿಗೆ ಅನುಮತಿ ಕೊಟ್ಟಿಲ್ಲ. ಕಾರ್ಯಕ್ರಮದಲ್ಲಿ ಹಾಕಿದ್ದ ಧ್ವನಿವರ್ಧಕಗಳು ಹತ್ತಿರದ ನಿವಾಸಿಗಳಿಗೆ ತೊಂದರೆ ನೀಡಿತು" ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಜರಂಗದಳದ ಕಾರ್ಯಕರ್ತರ ದಾಳಿ ಬೆನ್ನಲ್ಲೇ ಕಾರ್ಯಕ್ರಮದಲ್ಲಿದ್ದ ಯುವಕ, ಯುವತಿಯರು ಓಡಿ ಹೋಗಿದ್ದಾರೆ. "ಈವೆಂಟ್‌ನಲ್ಲಿ ಸುಮಾರು 15 ಹುಡುಗಿಯರು ಮತ್ತು 25 ಹುಡುಗರು ಭಾಗವಹಿಸಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವು ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು" ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
"ಸಂಘಟಕರು ನೀಡಿದ ಮೌಖಿಕ ದೂರಿನ ಮೇರೆಗೆ ನಾವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದೇವೆ. ಸಾರ್ವಜನಿಕ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, ಸಂಘಟಕರು ಯಾವುದೇ ಅನುಮತಿ ಪಡೆದಿಲ್ಲ" ಎಂದು ಕಂಕನಾಡಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ ಪ್ರಕಾಶ್ ತಿಳಿಸಿದ್ದಾರೆ.
ಆಚರಣೆಗೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಬಜರಂಗದಳ ಕಾರ್ಯಕರ್ತರ ವಿರುದ್ಧ ಪೊಲೀಸರು ನಂತರ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಗಣೇಶ್ ಅತ್ತಾವರ, ಜೈ ಪ್ರಶಾಂತ್, ಅಕ್ಷಯ್, ಚಿರಾಗ್, ಮಿಥುನ್ ಮತ್ತು ಬಾಲಚಂದ್ರ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಜಾನ್ ಕುರಿತು ನೀಡಿದ ಹೇಳಿಕೆಯನ್ನು ವಿರೋಧಿಸಿ ಮುಸ್ಲಿಂ ಯುವಕರೊಬ್ಬರು ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯ ಮೇಲೆ ಹತ್ತಿ ಅಜಾನ್ ಕರೆ ನೀಡಿದ್ದರು. ಬಳಿಕ ಬಲಪಂಥೀಯ ಸಂಘಟನೆ ಬಜರಂಗ ದಳದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮೇಲೆ 'ಗೋಮೂತ್ರ' ಸಿಂಪಡಿಸುವ ಶುದ್ಧೀಕರಣಕ್ಕೆ ಯತ್ನಿಸಿದ್ದರು. ಆದರೆ, ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದರು.












Click it and Unblock the Notifications