ವಿಜಯಪುರ-ಮಂಗಳೂರು ರೈಲು ವೇಳಾಪಟ್ಟಿ ಪರಿಷ್ಕರಣೆಗೆ ಸಹಿ ಅಭಿಯಾನ
ಮಂಗಳೂರು, ಅಕ್ಟೋಬರ್ 26: ಕರ್ನಾಟಕ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆಗೆ ಬೇಡಿಕೆ ಇಡಲಾಗಿದೆ. ಈ ರೈಲು ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ನೈಋತ್ಯ ರೈಲ್ವೆಗೆ ಒತ್ತಾಯಿಸಲು ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ.
Dakshina Kannada District Railway Users ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ವಿಜಯಪುರ-ಮಂಗಳೂರು ಜಂಕ್ಷನ್ ವೇಳಾಪಟ್ಟಿ ಬದಲು, ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಸಹಿ ಸಂಗ್ರಹ ಮಾಡಲಾಗುತ್ತಿದೆ. ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದೆ.

ಫೇಸ್‌ಬುಕ್ ಪೋಸ್ಟ್; ಅದು ಮೀಟರ್ ಗೇಜ್ ರೈಲ್ವೆ ಟ್ರ್ಯಾಕಿನ ಕಾಲಘಟ್ಟ. ಆ ಕಾಲಘಟ್ಟದಲ್ಲಿ ಕರಾವಳಿ ಕರ್ನಾಟಕ ಹಾಗು ಉತ್ತರ ಕರ್ನಾಟಕ,ದಕ್ಷಿಣ ಮಹಾರಾಷ್ಟ್ರವನ್ನು ಬೆಸೆಯುವ ಕೊಂಡಿ ಒಂದು ಇತ್ತು. ಅದುವೇ ಮಂಗಳೂರು-ಮೀರಜ್ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲು. ಈ ರೈಲು ಮಂಗಳೂರಿನಿಂದ ಹೊರಟು ಹಾಸನ, ಅರಸೀಕೆರೆ ಮಾರ್ಗವಾಗಿ ಹುಬ್ಬಳ್ಳಿ, ಬೆಳಗಾವಿಯಂತಹ ಪ್ರಮುಖ ನಗರಗಳನ್ನು ಹಾದುಹೋಗಿ ಮೀರಜ್ ತನಕ ಪ್ರಯಾಣಿಸುತ್ತಿತ್ತು.
ಗೇಜ್ ಪರಿವರ್ತನೆಯ ಸಮಯದಲ್ಲಿ ಸ್ಥಗಿತಗೊಂಡ ರೈಲು ಮತ್ತೆ ಆರಂಭಗೊಳ್ಳಲೇ ಇಲ್ಲ! ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ರೈಲು ಸೇವೆಯನ್ನು ಮತ್ತೆ ಆರಂಭಿಸಬೇಕು ಹಾಗು ಉತ್ತರ ಕರ್ನಾಟಕ ಹಾಗು ಕರಾವಳಿ ಕರ್ನಾಟಕದ ಮಧ್ಯೆ ರೈಲು ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆ ಬಂದ ನಂತರ 2019ರಲ್ಲಿ ವಿಜಯಪುರ ಹಾಗು ಮಂಗಳೂರು ಜಂಕ್ಷನ್ ಮಧ್ಯೆ ಹೊಸ ತತ್ಕಾಲ್ ರೈಲು ಸೇವೆಯನ್ನು ನೈಋತ್ಯ ರೈಲ್ವೆ ವಲಯವು ಆರಂಭಿಸಿತು.
ಪ್ರಸ್ತುತ ವಿಜಯಪುರದಿಂದ ಮಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ವಿಜಯಪುರದಿಂದ ಪ್ರತಿದಿನ ಸಂಜೆ 6:35ಕ್ಕೆ ಹೊರಟು ರಾತ್ರಿ 11:55ಕ್ಕೆ ಶ್ರೀ ಸಿದ್ಧರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣ ತಲುಪುತ್ತದೆ. ಅಲ್ಲಿಂದ ರಾತ್ರಿ 12:05ಕ್ಕೆ ಹೊರಟು ಮರುದಿನ ಮಧ್ಯಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ.
ಮಂಗಳೂರು ಜಂಕ್ಷನ್‌ನಿಂದ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಮಧ್ಯಾಹ್ನ 2:55ಕ್ಕೆ ಹೊರಟು ಮರುದಿನ ಮುಂಜಾನೆ 3:35ಕ್ಕೆ ಶ್ರೀ ಸಿದ್ಧರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣ ತಲುಪುತ್ತದೆ. ಅಲ್ಲಿಂದ ಮುಂಜಾನೆ 3:45ಕ್ಕೆ ಹೊರಟು ಬೆಳಗ್ಗೆ 9:35ಕ್ಕೆ ವಿಜಯಪುರ ತಲುಪುತ್ತದೆ.
ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಮೂಲಕ ಹಾದುಹೋಗುವ ಈ ರೈಲು ತನ್ನ ಮಾರ್ಗದ ಪ್ರಮುಖ ರೈಲು ನಿಲ್ದಾಣ, ಪಟ್ಟಣಗಳಲ್ಲಿ ನಿಲ್ಲುತ್ತದೆ. ಪ್ರತಿದಿನ ಸಾವಿರಾರು ಜನರನ್ನು ಕರಾವಳಿ ಕರ್ನಾಟಕ ಹಾಗು ಉತ್ತರ ಕರ್ನಾಟಕದ ಜೊತೆ ಸಂಪರ್ಕಿಸುತ್ತದೆ.
ಆದರೆ ಈ ರೈಲಿನ ವೇಳಾಪಟ್ಟಿ ಪ್ರಯಾಣಿಕರಿಗೆ ಅನುಕೂಲವಲ್ಲದ ಕಾರಣ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು ಹಾಗು ಮಂಗಳೂರಿನ ಮುಖ್ಯ ರೈಲು ನಿಲ್ದಾಣವಾದ ಮಂಗಳೂರು ಸೆಂಟ್ರಲ್ ತನಕ ಓಡಿಸಬೇಕೆಂಬ ಬೇಡಿಕೆ ಬಹಳ ಸಮಯದಿಂದ ಇದೆ.
ಈ ಬೇಡಿಕೆಯ ಅನುಸಾರ ವಿಜಯಪುರದಿಂದ ಸಂಜೆ 4 ಗಂಟೆಗೆ ಹೊರಟು ರಾತ್ರಿ 9:30ಕ್ಕೆ ಹುಬ್ಬಳ್ಳಿ, ಬೆಳಗ್ಗೆ 9:30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಸಂಜೆ 5 ಗಂಟೆಗೆ ಮಂಗಳೂರು ಸೆಂಟ್ರಲಿನಿಂದ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಹುಬ್ಬಳ್ಳಿ ಹಾಗು ಬೆಳಗ್ಗೆ 10:30ಕ್ಕೆ ವಿಜಯಪುರ ತಲುಪಲಿದೆ. ಆದರೆ ರೈಲಿನ ವೇಳಾಪಟ್ಟಿಯ ಪರಿಷ್ಕರಣೆ ಜೊತೆಗೆ ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಲು ರೈಲ್ವೆ ಇಲಾಖೆ ಇನ್ನು ಮನಸ್ಸು ಮಾಡಿದಂತೆ ಕಾಣುತ್ತಿಲ್ಲ.
ಹೀಗಾಗಿ ಈ ಬಗ್ಗೆ ನೈರುತ್ಯ ರೈಲ್ವೆ ವಲಯ ಹಾಗು ದಕ್ಷಿಣ ರೈಲ್ವೆ ವಲಯಕ್ಕೆ ಮನವಿ ಮಾಡುವ ಸಲುವಾಗಿ ಹಾಗು ಪ್ರಯಾಣಿಕರ ಬೇಡಿಕೆಯ ಬಗ್ಗೆ ಮನವರಿಕೆ ಮಾಡಲು ಈ ಸಹಿ ಅಭಿಯಾನವನ್ನು ನಾವು ಹಮ್ಮಿಕೊಳ್ಳುತ್ತಿದ್ದೇವೆ. ಈ ಅಭಿಯಾನ 21 ದಿನಗಳ ಕಾಲ ಅಂದರೆ ನವೆಂಬರ್ 15ರ ತನಕ ನಡೆಯಲಿದೆ.
ಪ್ರಯಾಣಿಕರ ಈ ಬೇಡಿಕೆಯನ್ನು ಈಡೇರಿಸಲು ಈ ಸಹಿ ಅಭಿಯಾನದಲ್ಲಿ ಜನರು ಭಾಗಿಯಾಗಿ ಹಾಗು ಅಭಿಯಾನವನ್ನು ಬೆಂಬಲಿಸಿ ಎಂದು ಮನವಿ ಮಾಡಲಾಗಿದೆ.
ಪ್ರಯಾಣಿಕರು ಸಹಿ ಮಾಡಲು ಲಿಂಕ್ https://chng.it/PxXYGqrP












Click it and Unblock the Notifications