ಸ್ಕೋಲಿಯೋಸಿಸ್‌ನಿಂದ ಬಳಲುತ್ತಿದ್ದರೂ 624 ಅಂಕ ಪಡೆದ ಪುತ್ತೂರಿನ ಸಿಂಚನಾ
ಮಂಗಳೂರು, ಏಪ್ರಿಲ್ 30:ದೈಹಿಕ ನ್ಯೂನತೆ ಇದ್ದರೂ ಯಶಸ್ಸು ಸಾಧಿಸುವ ಛಲದೊಂದಿಗೆ ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬಾಲಕಿಯ ಕಥೆ ಇದು. ಹೆಸರು ಸಿಂಚನಾ ಲಕ್ಷ್ಮೀ. ಪುತ್ತೂರಿನ ಈ ವಿದ್ಯಾರ್ಥಿನಿ ತನ್ನ ಅಸಾಮಾನ್ಯ ಸಾಧನೆಯಿಂದ ರಾಜ್ಯದ ಗಮನ ಸೆಳೆದಿದ್ದಾಳೆ.
ಹೌದು, ಸಾಧನೆ ಮಾಡುವ ಛಲವಿದ್ದರೆ ಎಂಥಹ ದೈಹಿಕ ನ್ಯೂನತೆಯೂ ಬಾಧಿಸದು ಎಂಬುದನ್ನು ಸಿಂಚನಾ ಲಕ್ಷ್ಮಿ ತೋರಿಸಿ ಕೊಟ್ಟಿದ್ದಾಳೆ. ಅನಾರೋಗ್ಯವಿದ್ದರೂ ಎಲ್ಲವನ್ನೂ ಮೆಟ್ಟಿ ನಿಂತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳನ್ನು ಪಡೆದು ಸಾಧಿಸಿ ತೋರಿಸಿದ್ದಾಳೆ ಸಿಂಚನಾ ಲಕ್ಷ್ಮೀ .
ಬೆನ್ನುಹುರಿ ಸಮಸ್ಯೆ ಸ್ಕೋಲಿಯೋಸಿಸ್‌ನಿಂದ ಬಳಲುತ್ತಿರುವ ಸಿಂಚನಾ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 624 ಅಂಕ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಪುತ್ತೂರಿನ ಕೋಡಂಕೇರಿ ಬಂಗಾರಡ್ಕ ನಿವಾಸಿ ಕೃಷಿಕರಾಗಿರುವ ಮುರಳೀಧರಮತ್ತು ಶೋಭಾ ದಂಪತಿಯ ಪುತ್ರಿಯಾಗಿರುವ ಸಿಂಚನಾ , ವಿವೇಕಾನಂದ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‌ನ ವಿದ್ಯಾರ್ಥಿನಿ .

ಸಿಂಚನಾಗೆ ಸ್ಕೋಲಿಯೋಸಿಸ್‌ಗಾಗಿ ಈಗಾಗಲೇ 6 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಮುರಳೀಧರ ಮತ್ತು ಶೋಭಾ ದಂಪತಿಗಳು ಮಗಳ ಚಿಕಿತ್ಸೆಗೆ ಈವರೆಗೆ 25 ಲಕ್ಷಕ್ಕೂ ಹೆಚ್ಚು ಹಣವನ್ನು ವ್ಯಯಿಸಿದ್ದಾರೆ. ಸಾಧಿಸುವ ಛಲವಿದ್ದರೆ ಯಾವುದೂ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಸಿಂಚನಾ ಸಾಬೀತು ಮಾಡುವ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾಳೆ.












Click it and Unblock the Notifications