ಮುಂದಿನ ಚುನಾವಣೆಯೊಳಗೆ ಸಿದ್ಧರಾಮಯ್ಯ ಜೈಲು ಪಾಲು: ನಳಿನ್ ಕುಮಾರ್ ಕಟೀಲ್ ಭವಿಷ್ಯ
ಮಂಗಳೂರು, ಜನವರಿ, 02: ಮುಂದಿನ ವಿಧಾನಸಭಾ ಚುನಾವಣೆಯೊಳಗಡೆ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ. ಅವರ ಎಲ್ಲಾ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ "ಬೂತ್ ವಿಜಯ ಅಭಿಯಾನ" ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆಯಲ್ಲಿ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿದ ಕಾಂಗ್ರೆಸ್ ಮೇಲೆ ಹರಿಹಾಯ್ದ ಅವರು, ಕಾಂಗ್ರೆಸ್ 100% ಭ್ರಷ್ಟಾಚಾರಿಗಳ ಪಕ್ಷವಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರಿಗಳ ಪಕ್ಷ, ಭ್ರಷ್ಟಾಚಾರದ ಪಿತಾಮಹ, ಭ್ರಷ್ಟಾಚಾರಿಗಳಲ್ಲಿ ಮಹಾಭ್ರಷ್ಟಾಚಾರಿಗಳು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎಂದು ನೇರವಾಗಿ ಆರೋಪಿಸಿದರು.
ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ? 40% ದಾಖಲೆಗಳಿದ್ದರೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಬಹುದು. ಒಂದು ವೇಳೆ ಆರೋಪ ದೃಢವಾದಲ್ಲಿ ಎಷ್ಟೇ ಪ್ರಭಾವಿ ಮಂತ್ರಿಯಿರಲಿ ಅವರನ್ನು ತೆಗೆದು ಬಿಸಾಡಿ ಜೈಲಿಗಟ್ಟುತ್ತೇವೆ. ಬಿಜೆಪಿ ಪಾರದರ್ಶಕವಾಗಿರುವುದರಿಂದ ನಮ್ಮ ಯಾರ ಮೇಲೂ ಕೇಸು ದಾಖಲಿಸಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

8 ಸ್ಥಾನದಲ್ಲೂ ಬಿಜೆಪಿ ವಿಜಯ ಸಾಧಿಸಲಿದೆ
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯು.ಟಿ.ಖಾದರ್, ರಮಾನಾಥ ರೈ, ಜೆ.ಆರ್.ಲೋಬೊ ನಡುವೆಯೂ ಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿ ಬೂತ್ ಕೆಲಸ ಮಾಡಲು ಒಬ್ಬ ಹಿಂದೂ ಸಿಗುವುದಿಲ್ಲ. ಆದ್ದರಿಂದ ಮುಂದಿನ 15 ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿರುತ್ತದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಎಂಟೂ ಸ್ಥಾನದಲ್ಲೂ ಬಿಜೆಪಿ ವಿಜಯ ಸಾಧಿಸಲಿದೆ. ಗೋಹತ್ಯೆ, ಮತಾಂತರ ನಿಷೇಧ ಕಾನೂನುಗಳನ್ನು ಜಾರಿಗೊಳಿಸಿದ ಬಿಜೆಪಿ ಸರ್ಕಾರ ಇದೀಗ ಲವ್ ಜಿಹಾದ್ ಕಾನೂನನ್ನು ತರಲಿದೆ ಎಂದು ಭರವಸೆ ನೀಡಿದರು.

ನಾವು ಡಂಗೂರ ಸಾರುವುದಿಲ್ಲ-ಕಟೀಲ್
ಡಿ.ಕೆ. ಶಿವಕುಮಾರ್ ರಾಜ್ಯಾಧ್ಯಕ್ಷರಾದ ಬಳಿಕ ಕಾಂಗ್ರೆಸ್ ಒಡೆದು ಮೂರು ಚೂರಾಗಿದೆ. ಆದರೆ ನಾನು ರಾಜ್ಯಾಧ್ಯಕ್ಷನಾದ ಬಳಿಕ ಬಿಜೆಪಿ ಒಂದೇ ಆಗಿದೆ. ನಾವು ಡಂಗೂರ ಸಾರುವುದಿಲ್ಲ. ಬಾಂಬ್, ಗರ್ನಲ್ ಸಿಡಿಸುವುದಿಲ್ಲ. ಬದಲಾಗಿ ಮನೆಮನೆಗಳಿಗೆ ಹೋಗಿ ಮನಮನಗಳಲ್ಲಿ ಕಮಲವನ್ನು ಅರಳಿಸುತ್ತೇವೆ. ಆದರೆ ಕಾಂಗ್ರೆಸ್ ಒಡೆದು ಆಳುವ ನೀತಿಯ ಮೂಲಕ ಮನೆಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ಮೂಲಕ ಕಾಂಗ್ರೆಸ್ಸೇ ಒಡೆದು ಹೋಗಿದೆ. ಆದರೆ ಬಿಜೆಪಿ ಒಂದಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಜಿಲ್ಲೆಯಲ್ಲಿ "ಬೂತ್ ವಿಜಯ ಅಭಿಯಾನ" ಆರಂಭ
ಇಡೀ ರಾಜ್ಯದಲ್ಲಿ ಬಿಜೆಪಿ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಬೆಳೆದಿದೆ. ದೇಶದಲ್ಲಿ ಪರಿವರ್ತನೆ ಕಾಣಬೇಕಾದರೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ. ಆದ್ದರಿಂದ "ಬೂತ್ ವಿಜಯ ಅಭಿಯಾನ", "ವಿಜಯೀ ಸಂಕಲ್ಪ ಅಭಿಯಾನ"ದ ಮೂಲಕ ಅಧಿಕಾರವನ್ನು ಹಿಡಿಯಬೇಕಿದೆ ಎಂದು ಹೇಳಿದ್ದಾರೆ.

ಬೂತ್ ಕಮಿಟಿ ಬಲಪಡಿಸಲು ಪ್ಲಾನ್
ಜನವರಿ 2ರಿಂದ 12ರವರೆಗೆ ಬೂತ್ ವಿಜಯ ಅಭಿಯಾನ ನಡೆಯಲಿದೆ. ಈ 10 ದಿನಗಳಲ್ಲಿ ಬೂತ್ ಕಮಿಟಿ ಬಲಪಡಿಸುವ, ಪೇಜ್ ಪ್ರಮುಖ್ ಸರಿಪಡಿಸುವ, ವಾಟ್ಸ್ಆ್ಯಪ್ ಗ್ರೂಪ್ ರಚಿಸುವ, ಒಂದು ಬೂತ್ ಮಟ್ಟದಲ್ಲಿ ಕನಿಷ್ಠ 25 ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಕಾರ್ಯ ನಡೆಯುತ್ತದೆ. ಬಳಿಕ 'ವಿಜಯೀ ಸಂಕಲ್ಪ ಅಭಿಯಾನ'ವು ಜನವರಿ 21ರಿಂದ 29ರವರೆಗೆ ನಡೆಯಲಿದೆ. ಈ ವೇಳೆ ಮನೆ-ಮನೆಗಳಲ್ಲಿ ಬಿಜೆಪಿಯ ಯೋಜನೆಗಳ ಪ್ರಚಾರ, "ನಮ್ಮ ಮನೆ ಬಿಜೆಪಿ ಮನೆ" ಸ್ಟಿಕ್ಕರ್ ಅಭಿಯಾನ, ಪ್ರತೀ ಬೂತ್‌ಗಳಲ್ಲಿ ಗೋಡೆ ಬರಹ, ಸದಸ್ಯತನ ಅಭಿಯಾನ, ಪ್ರತೀ ಬೂತ್‌ಗಳಲ್ಲಿ ಫಲಾನುಭವಿಗಳ ಸಂಪರ್ಕ ಮಾಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸುವ ಕಾರ್ಯ ಮಾಡಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.












Click it and Unblock the Notifications