ಸಿಎಂ ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರನ್ನು ಕೊಂದಿದ್ದಾರೆ ಎಂದ ಬಿಜೆಪಿ ಶಾಸಕ: ಪಜೀತಿಗೆ ಸಿಲುಕಿದ ಹರೀಶ್ ಪೂಂಜಾ
ಮಂಗಳೂರು, ಮೇ, 24: ದಕ್ಷಿಣ ಕನ್ನಡದಲ್ಲಿ ಹಿಂದುತ್ವ ಮತ್ತು ಬಿಜೆಪಿ ನಡುವಿನ ತಿಕ್ಕಾಟ ಮತ್ತೊಂದು ಸ್ವರೂಪ ಪಡೆದಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜಿಲ್ಲೆಯ ಪ್ರಬಲ ಮೂವರು ಹಿಂದೂ ಮುಖಂಡರ ವಿರುದ್ಧ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪ ಮಾಡಿ ಪಜೀತಿಗೆ ಸಿಲುಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಕಳೆದ ವಾರ ನಡೆದ ಸ್ಥಳೀಯ ಸಮಾರಂಭವೊಂದರಲ್ಲಿ ಮಾತನಾಡಿದ ಈ ಹೇಳಿಕೆಯ ಆಡಿಯೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹಿಂದೂ ಕಾರ್ಯಕರ್ತ ಸತ್ಯಜಿತ್ ಸುರತ್ಕಲ್ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದರು. ಅದಕ್ಕೆ "24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ ಸಿದ್ದರಾಮಯ್ಯನವರಿಗೆ ನೀವು ಮತ ಕೇಳಿದ್ದೀರಿ. ಭಜರಂಗದಳದ ಮೇಲೆ ನಿಷೇಧ ಹೇರಲು ಮುಂದಾಗಿರುವ ಕಾಂಗ್ರೆಸ್‌ಗೆ ಮತ ಯಾಚಿಸಿದ್ದೀರಿ. ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳುತ್ತಿದ್ದಾರೆ" ಎಂತಾ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಬೆಳ್ತಂಗಡಿ ಗುರುವಾಯನಕೆರೆಯ ಕಿನ್ಯಮ್ಮ ಸಭಾಭವನದಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಸಮಾವೇಶದಲ್ಲಿ ಶಾಸಕ ಹರೀಶ್ ಪೂಂಜಾ ಸಿಎಂ ಸಿದ್ಧರಾಮಯ್ಯ 24 ಹಿಂದೂ ಕಾರ್ಯಕರ್ತರನ್ನು ಕೊಂದಿದ್ದಾರೆ ಎಂಬ ಹೇಳಿಕೆ ನೀಡಿದ್ದು, ಹರೀಶ್ ಪೂಂಜಾ ಅವರ ಹೇಳಿಕೆ ಖಂಡಿಸಿ ಪುತ್ತೂರು ನಗರಸಭಾ ಸದಸ್ಯ ಮಹಮ್ಮದ್ ರಿಯಾಜ್ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೇ 22ರಂದು ನಡೆದ ಕಾರ್ಯಕ್ರಮದಲ್ಲಿ ಹರೀಶ್ ಪೂಂಜಾ ಈ ಹೇಳಿಕೆ ನೀಡಿದ್ದರು. ಆಧಾರ ರಹಿತವಾಗಿ ಹರೀಶ್ ಪೂಂಜಾ ಈ ಹೇಳಿಕೆಯನ್ನು ನೀಡಿದ್ದು, ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಸಲ್ಲಿಕೆಯ ಬಳಿಕ ಪುತ್ತೂರು ನಗರಸಭಾ ಸದಸ್ಯ ಮಹಮ್ಮದ್ ರಿಯಾಜ್ ಮಾಧ್ಯಮಗಳ ಬಳಿ ಪ್ರತಿಕ್ರಿಯಿಸಿದ್ದು, ಹರೀಶ್ ಪೂಂಜಾ ಹೇಳಿಕೆ ನಿರಾಧಾರವಾಗಿದೆ. ಹರೀಶ್ ಪೂಂಜಾ ನಾಟಕೀಯ ರಾಜಕಾರಣಿ. ಹಲವು ಸಂದರ್ಭದಲ್ಲಿ ನಾಟಕ ಮಾಡಿ ರಾಜಕೀಯ ಲಾಭ ಪಡೆದು ಪ್ರಚಾರ ಪಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ಮೂರುವರೆ ವರ್ಷದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿತ್ತು. ಹರೀಶ್ ಪೂಂಜಾ ಹೇಳಿಕೆಯೇ ಸತ್ಯ ಆಗಿದ್ದರೆ ಆ ಅವಧಿಯಲ್ಲಿ ತನಿಖೆ ಮಾಡಬಹುದಿತ್ತು. ಓರ್ವ ವಕೀಲನಾಗಿ ಹರೀಶ್ ಪೂಂಜಾ ಸುಳ್ಳು ಹೇಳುವುದನ್ನು ಸಹಿಸುವುದಿಲ್ಲ. ಮುಂದೆ ಕ್ಷೇತ್ರಕ್ಕೆ ಅಭಿವೃದ್ಧಿ ಅನುದಾನ ತರಬೇಕಾದರೆ ಹರೀಶ್ ಪೂಂಜಾ ಮರೆಯಬಾರದು ಎಂದು ಮಹಮ್ಮದ್ ರಿಯಾಜ್ ಆಕ್ರೋಶ ವ್ಯಕ್ತಪಡಿಸಿದರು.
ಅರುಣ್ ಪುತ್ತಿಲ ಬಳಿಕ ಬಿಜೆಪಿ ನಾಯಕರು ಇತರ ನಾಯಕರನ್ನು ಟಾರ್ಗೆಟ್ ಮಾಡಿದ್ದು, ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ನಡುವಿನ ಕಂದಕವನ್ನು ಜಾಸ್ತಿ ಮಾಡಿದೆ.
ಬೆಳ್ತಂಗಡಿಯಲ್ಲಿ ಕಾರ್ಯಕರ್ತರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ್ದ ಶಾಸಕ ಹರೀಶ್ ಪೂಂಜಾ, ಜಿಲ್ಲೆಯ ಹಿರಿಯ ಹಿಂದೂ ಮುಖಂಡರಾದ ಸತ್ಯಜಿತ್ ಸುರತ್ಕಲ್, ಪ್ರವೀಣ್ ವಾಲ್ಕೆ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರು ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಪ್ರಚಾರ ಮಾಡಿದ್ದಾರೆ. ನಾನು ಹಿಂದುತ್ವಕ್ಕಾಗಿ ಮಾಡಿದ ಅವಮಾನ ಏನು? ಹಾಗೆಯೆ ಭಜರಂಗದಳ ನಿಷೇಧ ಮಾಡಲು ಹೊರಟಿರುವ ನಿಮ್ಮ ಹಿಂದುತ್ವ ಯಾವುದು ಎಂದು ಹಿಂದೂ ಮುಖಂಡರನ್ನು ಪ್ರಶ್ನಿಸಿದ್ದರು.
ಹರೀಶ್ ಪೂಂಜಾ ಅವರ ಈ ಹಿಂದುತ್ವದ ಹೇಳಿಕೆಯೇ ಜಿಲ್ಲೆಯಲ್ಲಿ ವಿವಾದ ಸೃಷ್ಟಿಸಿದೆ. ಭಾಗಶಃ ಜೀವನ ಸವೆಸಿದ ಹಿಂದೂ ಮುಖಂಡರ ಹಿಂದುತ್ವದ ಬಗ್ಗೆ ಸಾರ್ವಜನಿಕವಾಗಿಯೇ ಪ್ರಶ್ನಿಸಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಟಾರ್ಗೆಟ್ ಮಾಡಿದ ಬಿಜೆಪಿ ನಾಯಕರು ಈಗ ಇತರ ಹಿಂದೂ ಮುಖಂಡರನ್ನು ಗುರಿಯಾಗಿಸಿ ಸಾರ್ವಜನಿಕವಾಗಿ ನಿಂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಹರೀಶ್ ಪೂಂಜಾ ಹೇಳಿಕೆಗೆ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಹಿಂದುತ್ವನ್ನು ಬಳಸಿರುವ ಶಾಸಕ ಹರೀಶ್ ಪೂಂಜಾ ಅವರಿಂದ ಹಿಂದುತ್ವದ ಪಾಠವನ್ನು ಕೇಳುವ ಅವಶ್ಯಕತೆ ನಮಗಿಲ್ಲ. ನಿಸ್ವಾರ್ಥವಾಗಿ ಜೀವನ ಪರ್ಯಂತ ಹಿಂದುತ್ವದ ಸೇವೆ ಮಾಡಿದ್ದೇವೆ ಎಂದರು.
ಹಾಗೆಯೆ ಸಾವಿರಾರು ದಿನಗಳ ಕಾಲ ಕೋರ್ಟ್, ಪೊಲೀಸ್ ಸ್ಟೇಷನ್ ಅಂತಾ ಕಳೆದಿದ್ದೇನೆ. ಬಿಲ್ಲವ ಸಮಾಜದ ಸಂಘಟನೆಯ ರಾಜ್ಯಾಧ್ಯಕ್ಷನಾಗಿ ಬೆಳ್ತಂಗಡಿಗೆ ಬಂದಿದ್ದೇನೆಯೇ ಹೊರತು, ಯಾವುದೇ ರಾಜಕೀಯ ಅಭ್ಯರ್ಥಿಯ ಪ್ರಚಾರಕ್ಕೆ ಅಲ್ಲ. ಈ ಬಗ್ಗೆ ಎಲ್ಲಿ ಬೇಕದರೂ ಸ್ಪಷ್ಟನೆ ನೀಡುವುದಕ್ಕೆ ಸಿದ್ಧನಾಗಿದ್ದೇನೆ ಅಂತಾ ಸತ್ಯಜಿತ್ ಸುರತ್ಕಲ್ ಹರೀಶ್ ಪೂಂಜಾಗೆ ಸವಾಲೂ ಹಾಕಿದ್ದಾರೆ.
ಇನ್ನು ಹಿರಿಯ ಹಿಂದೂ ಮುಖಂಡ ಪ್ರವೀಣ್ ವಾಲ್ಕೆ ಕೂಡ ಹರೀಶ್ ಪೂಂಜಾ ಹೇಳಿಕೆಗೆ ಕೆಂಡಾಮಂಡಲವಾಗಿದ್ದಾರೆ. ನಮ್ಮ ಹೋರಾಟ ಜೀವನದ ಅನುಭವದಷ್ಟು ವಯಸ್ಸು ಹರೀಶ್ ಪೂಂಜಾಗೆ ಆಗಿಲ್ಲ. ಬೆಳ್ತಂಗಡಿಗೆ ಬಂದ ಸಂಧರ್ಭದಲ್ಲಿ ಕಾಂಗ್ರೆಸ್‌ನಲ್ಲಿರುವ ಹಿಂದೂ ಕಾರ್ಯಕರ್ತರ ಜೊತೆ ಅವರು ಕೇಳಿದ್ದಕ್ಕೆ ಫೋಟೋ ತೆಗೆದಿದ್ದೇನೆಯೇ ಹೊರತು ಯಾವುದೇ ಪ್ರಚಾರಕ್ಕೆ ಹೋಗಿಲ್ಲ. ಈ ಬಗ್ಗೆ ಪ್ರಮಾಣ ಮಾಡಲು ಬರಲಿ ಎಂದು ಸವಾಲೆಸಿದಿದ್ದಾರೆ.
ಚುನಾವಣೆಯ ಸಂಧರ್ಭದಲ್ಲಿ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಪರವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪ್ರಚಾರ ಮಾಡಿದ್ದರು. ಈ ವೇಳೆ ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿಗಳು ಪೂಂಜಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದುತ್ವದ ಬಗ್ಗೆ ಮಾತನಾಡುವ ಹರೀಶ್ ಪೂಂಜಾ ಹಿಂದುತ್ವದ ಪರವಾಗಿರುವ ಪುತ್ತಿಲ ವಿರುದ್ಧವಾಗಿ ಪ್ರಚಾರ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications