ಶಿರಾಡಿ ಬಂದ್, ಚಾರ್ಮಾಡಿ ಘಾಟ್‌ನಲ್ಲಿ ಟ್ರಾಫಿಕ್ ಜಾಮ್
ಮಂಗಳೂರು, ಜ.3 : ಶಿರಾಡಿ ಘಾಟ್ ರಸ್ತೆಯ ಕಾಮಗಾರಿಗಾಗಿ ವಾಹನಗಳ ಸಂಚಾರದ ಪಥ ಬದಲಾವಣೆ ಮಾಡಿರುವುದರಿಂದ ಹಲವಾರು ಗೊಂದಲಗಳು ಉಂಟಾಗಿದೆ. ಶಿರಾಡಿ ಘಾಟ್‌ನಲ್ಲಿ ಸಂಚರಿಸುವ ಬಹುತೇಕ ವಾಹನಗಳು ಚಾರ್ಮಾಡಿ ಘಾಟ್ ರಸ್ತೆ ಮೂಲಕ ಸಂಚರಿಸಲು ಆರಂಭಿಸಿದ್ದು, ಇದರಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಶುಕ್ರವಾರ ಸುಮಾರು 30 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾಡಳಿತದ ನಿರ್ದೇಶನದಂತೆ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಲಘು ವಾಹನಗಳು ಚಾರ್ಮಾಡಿ ಘಾಟ್ ರಸ್ತೆ ಮೂಲಕ ಸಂಚರಿಸುತ್ತಿದೆ. ವಾಹನ ಚಾಲಕರು ಚಾರ್ಮಾಡಿ ಘಾಟಿಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಿಸಿದ್ದರಿಂದ 4ನೇ ತಿರುವಿನಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. [ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳು]

ಸುಮಾರು 11 ಕಿ.ಮೀಯ ಚಾರ್ಮಾಡಿ ಘಾಟ್ ರಸ್ತೆಯು ಕಡಿದಾದ ತಿರುವುಗಳನ್ನು ಹೊಂದಿದೆ. ಅತಿಯಾದ ವಾಹನಗಳ ಸಂಚಾರದಿಂದಾಗಿ ಶುಕ್ರವಾರ ಸಂಜೆ ವೇಳೆ ನೂರಾರು ವಾಹನಗಳು ಸುಮಾರು 30 ಕಿ.ಮೀ.ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದವು. [ಕುಂಭಕರ್ಣನ ನಿದ್ದೆಗೆ ಜಾರಲಿರುವ ಶಿರಾಡಿಘಾಟ್!]
ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಆರ್.ಲಿಂಗಪ್ಪ ಮತ್ತು ಸಿಬ್ಬಂದಿ ಹರಸಾಹಸಪಟ್ಟು, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ನಡುವೆಯೂ ದಿನವಿಡೀ ಸುಗಮ ಸಂಚಾರಕ್ಕಾಗಿ ಠಾಣೆಯಲ್ಲಿರುವ ಸಿಬ್ಬಂದಿಗಳನ್ನು ಘಾಟ್‌ನಲ್ಲಿ ನಿಯೋಜನೆ ಮಾಡಲಾಗಿದೆ.
ಮೋರಿಗಳು ಕುಸಿಯುವ ಸಾಧ್ಯತೆ : ಚಾರ್ಮಾಡಿ ಘಾಟ್ ಸಂಪರ್ಕಿಸುವ ರಸ್ತೆಗಳು ಅಲ್ಲಲ್ಲಿ ದುರಸ್ತಿಯಾಗಬೇಕಿದೆ. ಈ ಭಾಗದ ಹಲವಾರು ಮೋರಿಗಳು ಕುಸಿಯುವ ಅಪಾಯ ಎದುರಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯೂ ಇದೆ.

ಘಾಟ್‌ನಲ್ಲಿನ ಸಂಚಾರ ದಟ್ಟಣೆಯಿಂದಾಗಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ನಗರಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಪೊಲೀಸರು ಈ ಭಾಗದಲ್ಲಿ ಸುಗಮ ಸಂಚಾರಕ್ಕಾಗಿ ತಾಸುಗಟ್ಟಲೆ ಶ್ರಮ ಪಡಬೇಕಾಯಿತು.
ಚಾರ್ಮಾಡಿ ಘಾಟ್ ಸಂಪರ್ಕಿಸುವ ರಸ್ತೆಯಲ್ಲಿರುವ ನಿಡಿಗಲ್ ಸೇತುವೆ ಶತಮಾನೋತ್ಸವವನ್ನು ಆಚರಿಸಿದ್ದು ತೀರಾ ದುಸ್ತಿತಿಯಲ್ಲಿದೆ. ವಾಹನ ದಟ್ಟಣೆ ಕಾರಣದಿಂದ ಈ ಸೇತುವೆ ಕುಸಿಯಬಹುದು ಎಂದು ಈ ಭಾಗದ ಜನರು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications