ಮಂಗಳೂರು: ಪಿಎಫ್‌ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್, 100 ಜನ ವಶಕ್ಕೆ
ಮಂಗಳೂರು ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದು ಹಲವರು ಗಾಯಗೊಂಡಿದ್ದಾರೆ.
ಮಂಗಳೂರು, ಎಪ್ರಿಲ್ 4: ಮಂಗಳೂರು ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣವೊಂದರಲ್ಲಿ ಬಂಧಿತನಾದ ಯುವಕನಿಗೆ ನ್ಯಾಯ ಕೊಡುವಂತೆ ಆಗ್ರಹಿಸಿ ಇಂದು ಬೆಳಿಗ್ಗೆ ನೂರಾರು ಪಿಎಫ್ಐ ಕಾರ್ಯಕರ್ತರು ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ ಪರಿಣಾಮ 10 ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇನ್ನು ಸುಮಾರು 7 ಪೊಲೀಸರಿಗೂ ಗಾಯವಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು 100 ಕ್ಕೂ ಹೆಚ್ಚು ಜನರನ್ನು ಉರ್ವ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 3 ಜನರ ಮೇಲೆ ಪ್ರಕರಣವನ್ನೂ ದಾಖಲಿಸಲಾಗಿದೆ.
ಪ್ರಕರಣದ ಹಿನ್ನಲೆ
ಒಂದು ವರ್ಷದ ಹಿಂದೆ ಪ್ರಕಾಶ್ ಪೂಜಾರಿ ಎಂಬ ಹಿಂದೂ ನಾಯಕ ಕೊಲೆ ಯತ್ನ ನಡೆದಿತ್ತು. ಪ್ರಕರಣದಲ್ಲಿ ಒಟ್ಟು 7 ಜನ ಆರೋಪಿಗಳಾಗಿದ್ದಾರೆ. ಇದರಲ್ಲಿ 6 ಜನರನ್ನು ಬಂಧಿಸಲಾಗಿದ್ದು, ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ. ಇನ್ನು ಉಳಿದ ನಾಲ್ವರ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎಂಬುದು ಪಿಎಫ್ಐ ಕಾರ್ಯಕರ್ತರ ಆರೋಪವಾಗಿದೆ.

"ಪ್ರಕರಣದಲ್ಲಿ ಬಂಧಿತರಾಗಿರುವ ಓರ್ವ ಆರೋಪಿ ಕಾಟಿಪಳ್ಳ ಕೈಕಂಬದ ನಿವಾಸಿ ಅಹ್ಮದ್ ಖುರೇಶಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಇದರಿಂದ ಆತನನ್ನು ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು ಸದ್ಯ ಆತನ ಕಿಡ್ನಿ ಕಾರ್ಯ ಸ್ಥಗಿತಗೊಂಡಿದೆ ಎಂದು ಪೋಷಕರು ಹೇಳುತ್ತಿದ್ದಾರೆ," ಎಂದು ಪಿಎಫ್ಐ ಕಾರ್ಯಕರ್ತರು ದೂರಿದ್ದಾರೆ.

ಆದ್ದರಿಂದ ಅಹ್ಮದ್ ಖುರೇಶಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಅವರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣವನ್ನು ತನಿಖೆಗೊಳಪಡಿಸಿ ಖುರೇಶಿಗೆ ನ್ಯಾಯ ಒದಗಿಸಬೇಕು ಎಂದು ಇಂದು ಪ್ರತಿಭಟನೆ ನಡೆಸಲಾಗಿತ್ತು.
ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಲಾಠಿ ಚಾರ್ಜ್ ನಡೆಸಲಾಗಿದೆ.












Click it and Unblock the Notifications