ಮಂಗಳೂರು: ಸ್ಫೋಟದ ಹಿಂದಿನ ದಿನ ಉಜಿರೆಯ ಕಕ್ಕಿಂಜೆಯಲ್ಲಿ ರಿಂಗಣಿಸಿದ ಸ್ಯಾಟಲೈಟ್ ಫೋನ್
ಮಂಗಳೂರು, ನವೆಂಬರ್ 24: ನಗರದಲ್ಲಿ ನಡೆದ ಆಟೋ ಸ್ಪೋಟ ನಾನಾ ಆಯಾಮಗಳನ್ನು ಪಡೆಯುತ್ತಿದ್ದು, ತನಿಖೆಯೂ ಅದೇ ಹಾದಿಯಲ್ಲಿ ನಡೆಯುತ್ತಿದೆ. ಉಗ್ರರು ಕದ್ರಿ ದೇವಸ್ಥಾನ ಸೇರಿದಂತೆ ಆರು ಕಡೆ ಬ್ಲಾಸ್ಟ್ ಮಾಡುವುದಕ್ಕೆ ಟಾರ್ಗೆಟ್ ಮಾಡಿದ್ದು, ಗೊತ್ತಾಗುತ್ತಿದ್ದಂತೆ ಪೊಲೀಸ್ ಇಲಾಖೆಯೂ ಅಲರ್ಟ್ ಆಗಿದೆ. ಇನ್ನೊಂದೆಡೆ ಬಾಂಬ್ ಬ್ಲಾಸ್ಟ್‌ನ ಹಿಂದಿನ ದಿನ ಬೆಳ್ತಂಗಡಿಯ ಉಜಿರೆ ಸಮೀಪದ ದಟ್ಟ ಅರಣ್ಯದಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದ್ದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಮಂಗಳೂರು ಬಾಂಬ್ ಸ್ಪೋಟದ ತನಿಖೆ ಚುರುಕುಗೊಂಡಿದ್ದು ನಾನಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಉಗ್ರರ ಜಾಲ ಬಗೆದಷ್ಟು ಒಂದೊಂದು ಹೊರ ಬೀಳುತ್ತಲೇ ಇದೆ. ಇಂದು ಡಾರ್ಕ್ ವೆಬ್ ಮೂಲಕ ಬಹಿರಂಗಗೊಂಡ ಪೋಸ್ಟರ್ ಒಂದು ಮತ್ತೊಂದು ಆಯಾಮ ಪಡೆದಿದೆ. ಐಆರ್‌ಸಿ ಅನ್ನೋ ಹೆಸರಿನ ಉಗ್ರ ಸಂಘಟನೆ ಸ್ಪೋಟದ ಹೊಣೆ ಹೊತ್ತಿಕೊಂಡಿದ್ದು, ಶಾರಿಕ್‌ನೊಂದಿಗೆ ಕದ್ರಿ ದೇವಸ್ಥಾನವನ್ನು ಸ್ಪೋಟಿಸಲು ಪ್ಲಾನ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದು ತಕ್ಷಣವೇ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಕದ್ರಿ ದೇವಸ್ಥಾನದಲ್ಲಿ ಪರಿಶೀಲನೆ ನಡೆಸಿದೆ. ಟಾರ್ಗೆಟ್‌ನಲ್ಲಿದ್ದ ಕುದ್ರೋಳಿ, ಮಂಗಳಾದೇವಿ ದೇವಸ್ಥಾನ ಹಾಗೂ ಬಸ್ ರೈಲು ನಿಲ್ದಾಣ, ಆರ್‌ಎಸ್ಎಸ್ ಕಚೇರಿ ಸಂಘನಿಕೇತನದಲ್ಲೂ ಪರಿಶೀಲನೆ ನಡೆಸಿದ್ದಾರೆ.

ಈ ಬಾಂಬ್ ಬ್ಲಾಸ್ಟ್‌ನ ಹಿಂದೆ ತಮಿಳುನಾಡಿನ ಬೇಸ್ ಮೂಮೆಂಟ್ ಸಂಘಟನೆಯ ಕೈವಾಡವೂ ಇದೆ ಎನ್ನುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ತಮಿಳುನಾಡಿನ ಹಿರಿಯ ಪೊಲೀಸ್ ಅಧಿಕಾರಿಗಳೂ ಮಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. 1994ರ ಕೊಯಮತ್ತೂರು ಬಾಂಬ್ ಬ್ಲಾಸ್ಟ್‌ನ ಸೂತ್ರಧಾರಿಯಾಗಿದ್ದ ಅಲ್ ಉಮ್ಮಾ ಸಂಘಟನೆಯ ರೂಪಾಂತರಿ ಸಂಘಟನೆಯಾದ ಬೇಸ್ ಮೂಮೆಂಟ್ ಸಂಘಟನೆ ನಟೋರಿಯಸ್ ಟೆರರ್ ಸಂಘಟನೆ ಅಲ್ ಖೈದಾದಿಂದ ಪ್ರಭಾವಿತವಾಗಿದೆ. ಮಂಗಳೂರಿನ ಆಟೋ ಸ್ಪೋಟದಲ್ಲಿ ಬಳಸಲಾದ ಬಾಂಬ್‌ಗೂ ಬೇಸ್ ಮೂಮೆಂಟ್ ಬಳಸುವ ಬಾಂಬ್‌ಗೂ ಸಾಮ್ಯತೆ ಇರುವುದು ಹಾಗೂ ಶಾರಿಕ್ ಇವರೊಂದಿಗೆ ಸಂಪರ್ಕದಲ್ಲಿರುವುದು ಇದೀಗ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಈನಡುವೆ ಮಂಗಳೂರು ಸ್ಪೋಟದ ಮೊದಲ ದಿನ ಬೆಳ್ತಂಗಡಿಯ ಉಜಿರೆ ಸಮೀಪದ ಕಕ್ಕಿಂಜೆ ದಟ್ಟ ಅರಣ್ಯದಲ್ಲಿ ನಿಷೇಧಿತ ತುರಾಯ ಸಾಟ್ ಲೈಟ್ ಫೋನ್ ರಿಂಗಣಿಸಿದ್ದು, ವಿದೇಶದಿಂದ ಉಗ್ರರು ಶಾರಿಕ್ ಹಾಗೂ ಸ್ಲೀಪರ್ ಸೆಲ್ ಜೊತೆ ಮಾತುಕತೆ ನಡೆಸಿರುವ ಬಗ್ಗೆಯೂ ತನಿಖೆ ಆರಂಭಗೊಂಡಿದೆ.
ಒಟ್ಟಿನಲ್ಲಿ ಮಂಗಳೂರು ಬಾಂಬ್ ಸ್ಪೋಟದ ತನಿಖೆ ಎಲ್ಲಾ ಆಯಾಮಗಳಲ್ಲೂ ನಡೆಯುತ್ತಿದ್ದು, ದೇಶದ ವಿವಿದೆಡೆ ಪೊಲೀಸರ ತಂಡ ತೆರಳಿದೆ. ಇನ್ನು ಶಾರಿಕ್ ಚೇತರಿಸಿಕೊಂಡು ಬಾಯಿ ಬಿಟ್ಟರೆ ಇನ್ನೂ ಸಾಕಷ್ಟು ನಿಖರ ಕಾರಣಗಳು, ಆತನ ಸಂಚು, ಆತನ ಲಿಂಕ್ ಎಲ್ಲವೂ ಬಯಲಾಗಲಿದೆ.












Click it and Unblock the Notifications