ಈ ಹಿಂದೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ರಾ?; ಗುತ್ತಿಗೆದಾರ ಆತ್ಮಹತ್ಯೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಮಂಗಳೂರು, ಏಪ್ರಿಲ್ 12: "ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರೇ ಕಾರಣ," ಎಂದು ವಾಟ್ಸಪ್ ಮೂಲಕ ಮೆಸೇಜ್ ಕಳಿಸಿ ಬೆಳಗಾವಿಯ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ಕಮಿಷನ್ ಆರೋಪಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, "ಈ ಮೊದಲೇ ಹೇಳಿದಂತೆ ಸಂಪೂರ್ಣವಾಗಿ ವಿಚಾರಣೆ ಮಾಡಲಾಗುವುದು. ನನಗೆ ಬಂದಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಸಂತೋಷ್ ಪಾಟೀಲ್ ಎನ್ನುವ ವ್ಯಕ್ತಿ ಉಡುಪಿಯ ಲಾಡ್ಜ್‌ನಲ್ಲಿ ಮೃತದೇಹ ಪತ್ತೆಯಾಗಿದೆ," ಎಂದರು.

"ಈಗಾಗಲೇ ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಪಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಧಾವಿಸಿದ್ದು, ಎಲ್ಲ ರೀತಿಯ ಪ್ರಾಥಮಿಕ ತನಿಖೆಯಾಗುತ್ತಿದೆ. ಅಷ್ಟೆ ಅಲ್ಲದೇ ಕೂಡಲೇ ಮಂಗಳೂರಿನಿಂದ ಎಫ್ಎಸ್ಎಲ್ ಅಧಿಕಾರಿಗಳು ಹೋಗಲು ತಿಳಿಸಿದ್ದೇನೆ. ಈ ಎಲ್ಲ ಮಾಹಿತಿ ಕಲೆಹಾಕಿದ ಮೇಲೆ ಪ್ರಾಥಮಿಕ ವರದಿ ಬಂದ ನಂತರ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದರು.
"ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು. ಇದರಲ್ಲಿ ನಮ್ಮಿಂದ ಯಾವುದೇ ಹಸ್ತಕ್ಷೇಪ, ಮಾರ್ಗದರ್ಶನ ಮಾಡಲ್ಲ. ಪೊಲೀಸರು ಸರ್ವ ಸ್ವತಂತ್ರವಾಗಿ ತನಿಖೆ ನಡೆಸಲಿದ್ದಾರೆ. ತನಿಖೆಯಲ್ಲಿ ಸತ್ಯ ಹೊರಬರಲಿದೆ," ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಮುನ್ನ ಬರೆದ ಡೆತ್ ನೋಟ್ ಪತ್ರ ಮಾಧ್ಯಮಕ್ಕೆ ಕಳಿಸಿರುವುದನ್ನೂ ಕೂಡ ತನಿಖೆಗೆ ಒಳಪಡಿಸಲಾಗುವುದು. ಅದರ ಜೆನ್ಯುನಿಟಿ, ಏನಿದೆ? ಏನಿಲ್ಲ? ಅದೆಲ್ಲ ತನಿಖೆ ನಡೆಸಲಾಗುವುದು ಎಂದರು.
ಈ ಹಿಂದೆ ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿದಾಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದರಾ? ತನಿಖೆ ಮಾಡಿಸುತ್ತಿದ್ದೇವೆ, ಇದೊಂದು ಆತ್ಮಹತ್ಯೆ ಪ್ರಕರಣ. ಅದಕ್ಕೆ ಹಿನ್ನೆಲೆ ಇರುವಂತಹದು ಕೂಡ ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಆ ಹಿನ್ನೆಲೆ ಮತ್ತು ಈಗಿನ ಘಟನೆಯ ಸಂಪೂರ್ಣ ತನಿಖೆ ಆಗುತ್ತದೆ. ತನಿಖೆ ಸತ್ಯಾಂಶದ ಆಧಾರದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಚಿವ ಈಶ್ವರಪ್ಪ ಈಗ ಮೈಸೂರಿನಲ್ಲಿ ಇದ್ದಾರೆ, ವೈಯಕ್ತಿಕವಾಗಿ ಅವರ ಜೊತೆ ಮಾತನಾಡುತ್ತೇನೆ. ಅದಕ್ಕಿಂತ ಮುಖ್ಯವಾಗಿ ಪೊಲೀಸ್ ಇಲಾಖೆಗೆ ಈ ಬಗ್ಗೆ ನಿರ್ದೇಶನ ಕೊಟ್ಟಿದ್ದೇನೆ. ಸ್ಥಳ ಪರಿಶೀಲನೆ, ತನಿಖೆ, ಎಫ್ಎಸ್ಎಲ್ ಎಲ್ಲವೂ ಕಾನೂನುಬದ್ಧವಾಗಿ ಆಗಬೇಕು. ಬಹಳ ಪ್ರಾಮಾಣಿಕ ಮತ್ತು ಪಾರದರ್ಶಕ ತನಿಖೆ ಆಗಬೇಕು ಎಂದು ತಿಳಿಸಿದರು.
ಈಗಷ್ಟೇ ಸುದ್ದಿ ಬಂದಿದೆ, ಮುಂದೆ ಯಾರನ್ನು ಮಾತನಾಡಿಸಬೇಕೋ ಮಾತನಾಡಿಸೋಣ. ಸಚಿವ ಸಂಪುಟ ಸಹೋದ್ಯೋಗಿ ಈಶ್ವರಪ್ಪ ಆರೋಪ ಅಲ್ಲಗೆಳೆದಿದ್ದಾರೆ, ಅಲ್ಲದೇ ಕೋರ್ಟ್‌ನಲ್ಲಿ ಕೂಡ ಕೇಸ್ ಹಾಕಿದ್ದಾರೆ. ಅವರಿಗೆ ನೋಟಿಸ್ ಕೂಡ ಹೋಗಿದೆ. ಒಂದು ಸುದ್ದಿ ವಾಹಿನಿ ಮೇಲೆ ಕೇಸ್ ಹಾಕಿ ಅವರಿಗೂ ನೋಟಿಸ್ ಹೋಗಿದೆ ಎಂದು ಈಶ್ವರಪ್ಪ ನನಗೆ ಹೇಳಿದ್ದಾರೆ ಅಂತಾ ಬೊಮ್ಮಾಯಿ ಹೇಳಿದರು.
ಇವೆಲ್ಲವನ್ನೂ ತನಿಖೆ ವೇಳೆ ಪರಿಶೀಲನೆ ಮಾಡುವ ಕೆಲಸ ಆಗುತ್ತದೆ. ಅವರು ಆರೋಪ ಮಾಡಿದ್ದನ್ನು ಸರ್ಕಾರ ಅಥವಾ ಎಲ್ಲೂ ಕೊಟ್ಟಿಲ್ಲ. ಅವರು ಪ್ರೆಸ್‌ಮೀಟ್‌ನಲ್ಲಷ್ಟೇ ಆರೋಪ ಮಾಡಿದ್ದು, ಅದರ ಮೇಲೆ ಈಶ್ವರಪ್ಪನವರು ಮಾನನಷ್ಟ ಮೊಕದ್ದಮೆ ಕೂಡ ಹಾಕಿದ್ದಾರೆ. ಮುಂದೆ ಇದೆಲ್ಲಾ ಸಂಪೂರ್ಣವಾಗಿ ತನಿಖೆ ಆಗಲಿದೆ. ಪ್ರತಿಯೊಬ್ಬ ವ್ಯಕ್ತಿ ಬದುಕಿಗೆ ತನ್ನದೇ ಆದ ಕಿಮ್ಮತ್ತು ಮತ್ತು ಮೌಲ್ಯ ಇದೆ. ಅದನ್ನು ನಾವು ಗೌರವಿಸಬೇಕು. ಯಾವ ವಿಚಾರದಲ್ಲಿ ಈ ನಿರ್ಣಯ ತೆಗೆದುಕೊಂಡರು ಅನ್ನುವುದು ಗೊತ್ತಾಗಬೇಕು. ಅದು ಪ್ರಾಮಾಣಿಕ ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.












Click it and Unblock the Notifications