ಪುತ್ತೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ:ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಕಾರ್ಯಕರ್ತರು
ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಸಿರುವುದು ಶಾಸಕ ಸಂಜೀವ ಮಠಂದೂರು ಮತ್ತು ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ನಡುವೆ ಅಸಮಾಧಾನ ಸ್ಪೋಟಗೊಂಡಿದೆ.
ಮಂಗಳೂರು, ಫೆಬ್ರವರಿ 10: ಕೇಂದ್ರ ಗೃಹಸಚಿವ ಅಮಿತ್ ಷಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಪುತ್ತೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ.
ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ಹಾಲಿ ಶಾಸಕ ಸಂಜೀವ ಮಠಂದೂರು ಮತ್ತು ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಪುತ್ತೂರು ಪಟ್ಟಣದ್ಯಾಂತ ಮತ್ತು ಅಮಿತ್ ಷಾ ಸಂಚರಿಸುವ ರಸ್ತೆಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಅಮಿತ್ ಷಾಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಸಿರುವುದು ಈಗ ಅಸಮಾಧಾನಕ್ಕೆ ಕಾರಣವಾಗಿದೆ.
ಅಮಿತ್ ಷಾಗೆ ಸ್ವಾಗತ ಕೋರಿ ಹಾಕಿರುವ ಬ್ಯಾನರ್‌ಗಳನ್ನು ಸಂಜೀವ ಮಠಂದೂರು ಮಳೆಗಾಲದಲ್ಲಿ ಹುಟ್ಟಿದ ಅಣಬೆಗಳು ಎಂಬಾರ್ಥದಲ್ಲಿ ಟೀಕೆ ಮಾಡಿದ್ದು, ಅರುಣ್ ಕುಮಾರ್ ಪುತ್ತಿಲ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.

ಅಮಿತ್ ಷಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಪುತ್ತೂರು ಪಟ್ಟಣ ಬೊಳುವಾರಿನಲ್ಲಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಆಮಂತ್ರಣ ಪತ್ರಿಕೆ ಹಂಚಿಕೆ ಜಾಥಾ ನಡೆಸುತ್ತಿದ್ದು, ಈ ವೇಳೆ ಬಿಜೆಪಿಯ ಎರಡು ಬಣಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಶಾಸಕ ಸಂಜೀವ ಮಠಂದೂರು ವಿರುದ್ಧ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ಗುಂಪು ಹರಿಹಾಯ್ದಿದ್ದು, ಅಮಿತ್ ಷಾ ಸ್ವಾಗತಕ್ಕೆ ಹಾಕಿದ ಬ್ಯಾನರ್ ವಿಚಾರದಲ್ಲಿ ಬ್ಯಾನರ್‌ಗೆ ಅಪಹಾಸ್ಯ ಮಾಡಿದ್ದ ಶಾಸಕ ಸಂಜೀವ ಮಠಂದೂರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಮಳೆ ಬಂದಾಗ ಅಣಬೆಯಂತೆ ಕೆಲವರು ಹುಟ್ಟಿಕೊಳ್ಳುತ್ತಾರೆ ಎಂದು ಅಪಹಾಸ್ಯ ಮಾಡಿದ್ದ ಶಾಸಕರ ನಡೆಗೆ ಅರುಣ್ ಪುತ್ತಿಲ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ..
ಆಮಂತ್ರಣ ಪತ್ರಿಕೆ ವಿತರಣೆ ಸಂದರ್ಭದಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿ ಅರುಣ್ ಪುತ್ತಿಲ ಬೆಂಬಲಿಗರ ಗುಂಪು ಶಾಸಕ ಮಠಂದೂರುಗೆ ಮುತ್ತಿಗೆ ಹಾಕಿದ್ದು, ಈ ವೇಳೆ ಶಾಸಕ ಮತ್ತು ಪುತ್ತಿಲ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿಯಾಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಸಂದರ್ಭದಲ್ಲಿ ಇತರ ನಾಯಕರು ಪುತ್ತಿಲ ಅಭಿಮಾನಿಗಳನ್ನು ಸಮಾಧಾನಪಡಿಸುವ ಕಾರ್ಯ ಮಾಡಿದ್ದಾರೆ..

ಕಳೆದ ಬಾರಿಯೂ ಅರುಣ್ ಕುಮಾರ್ ಪುತ್ತಿಲಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದ್ದರು. ಕಳೆದ ಬಾರಿ ಟಿಕೆಟ್ ಕೈ ತಪ್ಪಿದ್ದು, ಈ ಬಾರಿ ಪುತ್ತಿಲಗೆ ಟಿಕೆಟ್ ನೀಡಬೇಕೆಂದು ಹಿಂದೂ ಕಾರ್ಯಕರ್ತರು ಪಕ್ಷದ ಮೇಲೆ ಒತ್ತಡ ಹಾಕಿದ್ದಾರೆ. ಈಗಾಗಲೇ ಈ ಬಗ್ಗೆ ಟ್ವೀಟ್ ಅಭಿಯಾನಗಳು ನಡೆಯುತ್ತಿದ್ದು ಬಿಜೆಪಿ ವರಿಷ್ಠರ ಗಮನ ಸೆಳೆಯಲು ನಾನಾ ಕಸರತ್ತು ನಡೆಯುತ್ತಿದೆ.












Click it and Unblock the Notifications