ಕೊಲ್ಲೂರು ದೇವಸ್ಥಾನದಲ್ಲಿ ಹಿಂದೆಯೂ ಸಲಾಂ ಮಂಗಳಾರತಿ ಇತ್ತು: ಯುಟಿ ಖಾದರ್ ಸ್ಪಷ್ಟನೆ
ಮಂಗಳೂರು, ನವೆಂಬರ್, 16; ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಈ ಹಿಂದೆ ಸಲಾಂ ಪೂಜೆ ಮಾಡಲಾಗುತಿತ್ತು. ಆದರೆ ಈಗಿನ ಆಡಳಿತ ಮಂಡಳಿ ಸಲಾಂ ಪೂಜೆ ಮಾಡಲಾಗುತ್ತಿಲ್ಲ ಅಂತಾ ಹೇಳುತ್ತಿದೆ. ದೇವಸ್ಥಾನದ ಇತಿಹಾಸ ನೋಡಿದರೆ ಅಲ್ಲಿ ಸಲಾಂ ಪೂಜೆ ನಡೆಯುತ್ತಿತ್ತು ಎನ್ನುವ ಬಗ್ಗೆ ಉಲ್ಲೇಖ ಇದೆ ಅಂತಾ ವಿಧಾನಸಭಾ ವಿಪಕ್ಷ ಉಪನಾಯಕ ಯುಟಿ ಖಾದರ್ ಮಂಗಳೂರಿನಲ್ಲಿ ಹೇಳಿದರು.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಬಸ್ ನಿಲ್ದಾಣ ವಿವಾದದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮದು ಊರು ಮತ್ತು ಜನರ ಮನಸ್ಸು ಕಟ್ಟುವ ಕೆಲಸವಾಗಿದೆ. ಕೆಲವರದ್ದು ಜನರ ಮನಸು ಮತ್ತು ಊರು ಒಡೆಯುವ ಕೆಲಸ ಆಗಿದೆ. ಅವರು ಒಡೆದುಕೊಂಡು ಹೋಗಲಿ, ನಾವು ಕಟ್ಟಿಕೊಂಡು ಹೋಗುತ್ತೇವೆ ಅಂತಾ ಯು.ಟಿ.ಖಾದರ್ ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ತನ್ವೀರ್ ಸೇಟ್ ನಿರ್ಧಾರಕ್ಕೆ ಖಾದರ್ ಪ್ರತಿಕ್ರಿಯೆ
ಇನ್ನು ತನ್ವೀರ್ ಸೇಟ್ ಅವರು ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಹೇಳಿದ್ದರು. ಈ ವಿಚಾರವಾಗಿ ಮಾತನಾಡಿದ ಖಾದರ್, ತನ್ವೀರ್ ಸೇಟ್‌ಗೆ ಪ್ರಜಾಪ್ರಭುತ್ವದಲ್ಲಿ ಹೇಳಿಕೆ ಕೊಡುವ ಅವಕಾಶ ಇದೆ. ಪಕ್ಷದ ಹಿರಿಯರ ಜೊತೆ ಚರ್ಚಿಸಿ ಅವರು ನಿರ್ಧಾರ ಮಾಡುತ್ತಾರೆ. ಕಾನೂನು ಮತ್ತು ನಿಯಮದ ಪ್ರಕಾರ ಏನು ಬೇಕಾದರೂ ಮಾಡಲಿ. ರಾಜ್ಯ ಸರ್ಕಾರದ ಅನುಮತಿ ಪಡೆದು ಉತ್ತಮ ಕೆಲಸ ಮಾಡಲು ಅವಕಾಶ ಇದೆ. ನಮ್ಮ ದೇಶದ ಎಲ್ಲಾ ಇತಿಹಾಸಕಾರರು, ಸ್ವತಂತ್ರ ಹೋರಾಟಗಾರರಿಗೆ ಗೌರವ ಸಲ್ಲಬೇಕು. ರಾಜ್ಯದಲ್ಲಿ ಸರ್ವಧರ್ಮಕ್ಕೆ ಕೊಡುಗೆ ಕೊಟ್ಟ ಹಲವು ಜನರಿದ್ದಾರೆ. ಅವರು ಕೊಟ್ಟ ಕೊಡುಗೆ ಮುಂದಿನ ಪೀಳಿಗೆಗೆ ಗೊತ್ತಾಗಬೇಕು. ಕೊಲ್ಲೂರಿನಲ್ಲಿಯೂ ಸಲಾಂ ಪೂಜೆ ಜಾರಿಯಲ್ಲಿತ್ತು. ಈ ಬಗ್ಗೆ ಶೃಂಗೇರಿಯಲ್ಲಿರುವ ಶಿಲೆಗಳಲ್ಲೂ ಬರೆದಿದೆ. ಅಂತಹ ಇತಿಹಾಸ ಮುಂದಿನ ಯುವ ಸಮುದಾಯಕ್ಕೆ ಗೊತ್ತಾಗಬೇಕು ಅಂತಾ ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು.

ಸಲಾಮ್ ಮಂಗಳಾರತಿ ಬದಲಾವಣೆಗೆ ಪ್ಲಾನ್
ಇತ್ತೀಚೆಗಷ್ಟೇ ಸಂಘಪರಿವಾರದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಐತಿಹಾಸಿಕ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಸಾಂಪ್ರದಾಯಿಕ ಸಲಾಮ್ ಮಂಗಳಾರತಿ ಪೂಜೆಯ ಹೆಸರು ಬದಲಾಯಿಸಲು ಸರ್ಕಾರ ಮುಂದಾಗಿತ್ತು. ಈ ಪೂಜೆಯನ್ನು "ದೀವಟಿಗೆ ಮಂಗಳಾರತಿ" ಪೂಜೆ ಎಂದು ಮರು ನಾಮಕರಣ ಮಾಡಲು ನಿರ್ಧರಿಸಿತ್ತು. ಮೈಸೂರು ಸಂಸ್ಥಾನದ ರಾಜನಾದ ಟಿಪ್ಪುಸುಲ್ತಾನ್ 1763ರಲ್ಲಿ ಐತಿಹಾಸಿಕ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಆಗಿನಿಂದ ಸಂರಕ್ಷಣೆ ಒದಗಿಸಿದ ನೆನಪಿಗಾಗಿ ಈ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ ಸಲಾಮ್ ಮಂಗಳಾರತಿ ನಡೆಸಿ ಟಿಪ್ಪುಗೆ ಗೌರವ ಸಲ್ಲಿಸಲಾಗುತ್ತಿತ್ತು. ಸದ್ಯ ಸಂಘಪರಿವಾರದ ಒತ್ತಡಕ್ಕೆ ಮಣಿದು ಸಲಾಮ್ ಮಂಗಳಾರತಿ ಹೆಸರನ್ನು ಬದಲಿಸಲು ಸರ್ಕಾರ ಮುಂದಾಗಿತ್ತು. ಸರ್ಕಾರದ ಈ ನಿರ್ಧಾರದಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಲೇ ಇವೆ.

ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಗಳ ಒತ್ತಡಕ್ಕೆ ಕೊನೆಗೂ ಮಣಿದಿದ್ದ ರಾಜ್ಯ ಸರ್ಕಾರ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಸಲಾಂ ಮಂಗಳಾರತಿ ಪೂಜೆಯ ಹೆಸರನ್ನು ಬದಲಾಯಿಸಲು ಒಪ್ಪಿಕೊಂಡಿತ್ತು. ಸುಮಾರು 250 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಮಂಗಳಾರತಿ ಪೂಜೆಯನ್ನು 'ದೀವಟಿಗೆ ಮಂಗಳಾರತಿ ಪೂಜೆ' ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಒಟ್ಟಿನಲ್ಲಿ ಸಲಾಮ್ ಮಂಗಳಾರತಿ ಹೆಸರು ಬದಲಾವಣೆ ವಿಚಾರವಾಗಿ ವಿವಾದಗಳು ಭುಗಿಲೇಳುತ್ತಲೇ ಇವೆ. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications