ಎಂಡೋಸಲ್ಫಾನ್ ಗೆ ಮಗನನ್ನು ಕಳೆದುಕೊಂಡವರಿಗೆ ಈಗ ಬ್ಯಾಂಕ್ ನೋಟಿಸ್
ಮಂಗಳೂರು, ಸೆಪ್ಟೆಂಬರ್ 2: ಎಂಡೋಸಲ್ಫಾನ್ ಗೆ ಮಗನನ್ನು ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ ಬ್ಯಾಂಕ್ ನ ಪರವಾಗಿ ಕೋರ್ಟ್ ನಿಂದ ನೋಟಿಸ್ ಬಂದಿದೆ. ಇದೇನು ನೋಟಿಸ್, ಏಕೆ ಬಂದಿದೆ ಎಂಬುದರ ವಿವರ ಮನ ಕಲುಕುವಂತಿದೆ.
ಎಂಡೋಸಲ್ಫಾನ್ ಪೀಡಿತ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ವಾಸುದೇವ ನಾಯಕ್ ಅವರು ಸರಕಾರಿ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಅದನ್ನು ತೀರಿಸಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ನಿಂದ ನೋಟಿಸ್ ಬಂದಿದೆ. ಸಾಲ ತೀರಿಸಬೇಕು ಎಂಬುದು ಒಂದು ಕಡೆಯಾದರೆ, ಮಗ ಶ್ರೇಯಸ್ ನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ದುಃಖ ಮತ್ತೊಂದು ಕಡೆ.

ವಾಸುದೇವ ನಾಯಕ್ ಅವರು ತಮ್ಮ ಮಗ ಶ್ರೇಯಸ್ ಚಿಕಿತ್ಸೆಗಾಗಿ ಸರಕಾರಿ ಬ್ಯಾಂಕಿನಿಂದ ವರ್ಷಗಳ ಹಿಂದೆ 28,000 ರುಪಾಯಿ ಸಾಲ ಪಡೆದಿದ್ದರು. ಇದನ್ನು ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಸಲಿಗೆ ಬಡ್ಡಿ ಸೇರಿ 58,000 ರುಪಾಯಿ ತಲುಪಿದೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ಪುತ್ರ ಶ್ರೇಯಸ್ ಮೃತಪಟ್ಟಿದ್ದರು. ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕಿನಿಂದ ವಕೀಲರ ಮೂಲಕ ನೋಟಿಸ್ ಬಂದಿದೆ.
ಮಗನ ಚಿಕಿತ್ಸೆಗಾಗಿ ವಾಸುದೇವ ನಾಯಕ್ ಹಲವರಿಂದ ಭಾರೀ ಮೊತ್ತ ಸಾಲವಾಗಿ ಪಡೆದಿದ್ದಾರೆ. ಈ ಮೊತ್ತವನ್ನು ಮರು ಪಾವತಿಸಲಾಗದೆ ಸಂಕಷ್ಟದಲ್ಲಿ ಸಿಲುಕಿರುವಾಗ ಕೋರ್ಟ್ ಗೆ ಹಾಜರಾಗುವಂತೆ ನೋಟಿಸ್ ಬಂದಿದೆ. ಇದೇ ವೇಳೆ ವಾಸುದೇವ ನಾಯಕ್ ಅವರ ಸಂಕಷ್ಟದ ಬಗ್ಗೆ ತಿಳಿದು ಸಾಲ ಮರು ಪಾವತಿಸಲು ಸಹಾಯ ಒದಗಿಸುವುದಾಗಿ ನಟ ಹಾಗೂ ಸಂಸದ ಸುರೇಶ್ ಗೋಪಿ ಭರವಸೆ ನೀಡಿದ್ದಾರೆ.












Click it and Unblock the Notifications