ರನ್ ವೇ ದುರಸ್ತಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ 4 ತಿಂಗಳ ಕಾಲ ವಿಮಾನ ಹಾರಾಟದಲ್ಲಿ ವ್ಯತ್ಯಯ
ಮಂಗಳೂರು, ಜನವರಿ 2: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ ತಿಂಗಳ ಕೊನೆಯ ವಾರದಿಂದ ಹಗಲು ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ. ಜನವರಿ 27ರಿಂದ ಮೇ31ರ ನಾಲ್ಕು ತಿಂಗಳ ಅವಧಿಯಲ್ಲಿ ರನ್ ವೇ ದುರಸ್ತಿ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಹಗಲು ಹೊತ್ತು ಹಾರಾಟ ನಡೆಸುವ ದೇಶಿ ಹಾಗೂ ವಿದೇಶಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ.
ನಾಲ್ಕು ತಿಂಗಳ ಅವಧಿಯಲ್ಲಿ ವಾರದ ಸೋಮವಾರ ದಿಂದ ಶನಿವಾರ ತನಕ ಬೆಳಗ್ಗೆ ಗಂಟೆ 9.30 ರಿಂದ ಸಂಜೆ 6 ಗಂಟೆಯವರೆಗೆ ರನ್ ವೇ ದುರಸ್ತಿ ಕಾಮಗಾರಿ ನಡೆಯಲಿದೆ. ರನ್ ವೇ ಡಾಂಬರೀಕರಣ ಕಾರ್ಯವಾಗ ಹಗಲು ಸಂದರ್ಭದಲ್ಲಿ ನಡೆಯಲಿದ್ದು, ರಾತ್ರಿ ವಿಮಾನ ಹಾರಾಟ ಯಥಾಸ್ಥಿತಿಯಲ್ಲಿ ಇರಲಿದೆ.
ಕಾಮಗಾರಿ ನಡೆಯುವ ಸಂಧರ್ಭದ ಹಗಲು ಹೊತ್ತಿನಲ್ಲಿ ವಿಮಾನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ರನ್ ವೇ ಬಂದ್ ಮಾಡಿ ಕಾಮಗಾರಿ ನಡೆಸುವುದರಿಂದ ಹಗಲು ವಿಮಾನಗಳನ್ನು ರಾತ್ರಿ ಸಮಯಕ್ಕೆ ನಿಗದಿ ಮಾಡಲು ಸೂಚಿಸಲಾಗಿದೆ. ಕಾಮಗಾರಿ ನಡೆಯುವ ನಾಲ್ಕು ತಿಂಗಳ ಅವಧಿಯಲ್ಲಿ ಆದಿತ್ಯವಾರ ಮತ್ತು ರಾಷ್ಟ್ರೀಯ ರಜಾ ದಿನಗಳಲ್ಲಿ ಕಾಮಗಾರಿ ನಡೆಯುದಿಲ್ಲ. ಈ ಸಂಧರ್ಭದಲ್ಲಿ ಹಗಲು ಹೊತ್ತು ವಿಮಾನ ಹಾರಾಟ ನಡೆಸಬಹುದಾಗಿದೆ.

ಮಂಗಳೂರು ವಿಮಾನನಿಲ್ದಾಣಕ್ಕೆ ಬಂದು ಹೋಗುವ ವಿಮಾನಗಳು ಸಂಜೆ6 ಗಂಟೆಯಿಂದ ಮರುದಿನ ಬೆಳಗ್ಗೆ 9.30ರ ಒಳಗೆ ಹಾರಾಟ ಮಾಡಬೇಕಿದೆ. ಈಗಾಗಲೇ ವಿಮಾನನಿಲ್ದಾಣ ಪ್ರಾಧಿಕಾರ ಮತ್ತು ವಿಮಾನ ನಿಲ್ದಾಣವನ್ನು ಗುತ್ತಿಗೆ ವಹಿಸಿ ಕೊಂಡಿರುವ ಕಂಪನಿ ವಿಮಾನಯಾನ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದು, ವಿಮಾನ ಹಾರಾಟದ ಪರಿಷ್ಕೃತ ಸಮಯ ತಿಳಿಸಲಾಗಿದೆ.
ಮಂಗಳೂರು ವಿಮಾನನಿಲ್ದಾಣದ ರನ್ ವೇ 2,450 ಮೀ ಉದ್ದ ಮತ್ತು 45 ಮೀಟರ್ ಅಗಲವಿದೆ. ಎರಡು ರನ್ ವೇಗಳನ್ನು ಹೊಂದಿರುವುದು ಈ ವಿಮಾನ ನಿಲ್ದಾಣ ದ ವಿಶೇಷತೆಯಾಗಿದೆ. ಎರಡು ಕಾಂಕ್ರೀಟ್ ರನ್ ವೇಗಳ ದುರಸ್ಥಿ ಕಾರ್ಯ ನಾಲ್ಕು ತಿಂಗಳ ಅವಧಿಯೊಳಗೆ ಮುಕ್ತಾಯಗೊಳಿಸಲು ಸೂಚನೆ ನೀಡಲಾಗಿದೆ.
ಕೆಲ ವರ್ಷಗಳ ಹಿಂದೆ ಕೇರಳ ಕೋಯಿಕ್ಕೋಡ್‌ನಲ್ಲಿ ರನ್ ವೇಯಿಂದ ವಿಮಾನ ಜಾರಿದ ಪ್ರಕರಣ ಬಳಿಕ ದೇಶದ ಎಲ್ಲಾ ವಿಮಾನ ನಿಲ್ದಾಣ ಗಳ ರನ್ ವೇ ಸುರಕ್ಷೆತೆಯ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನಗಳ ಮಹಾ ನಿರ್ದೇಶನಾಲಯ, ವಿಮಾನನಿಲ್ದಾಣಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಕೇಂದ್ರದ ಎಲ್ಲಾ ಮಾನದಂಡಗಳನ್ನು ಅಳವಡಿಸಲು ಈಗ ಮಂಗಳೂರು ವಿಮಾನ ನಿಲ್ದಾಣ ಮುಂದಾಗಿದೆ.
ಮಂಗಳೂರು ವಿಮಾನನಿಲ್ದಾಣದಲ್ಲಿ 2010 ಮೇ 22ರ ಮುಂಜಾನೆ ದುಬೈಯಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ವಿಮಾನ ಇನ್ನೇನು ಲ್ಯಾಂಡಿಂಗ್ ಮಾಡಲಿದೆ ಅನ್ನುವಷ್ಟರಲ್ಲಿ ರನ್ ವೇಯಿಂದ ಜಾರಿ ನಿಯಂತ್ರಣ ತಪ್ಪಿ ಭಾರಿ ದುರಂತ ಸಂಭವಿಸಿತ್ತು. ಈ ಮಹಾ ದುರಂತದಲ್ಲಿ 166 ಪ್ರಯಾಣಿಕರ ಪೈಕಿ 158 ಮಂದಿ ಮೃತಪಟ್ಟಿದ್ದರು.












Click it and Unblock the Notifications