ಕರಾವಳಿಯಲ್ಲಿ ನಿಲ್ಲದ ಹಿಂಸಾಚಾರ, ಆರೆಸ್ಸೆಸ್ ಕಾರ್ಯಕರ್ತನಿಗೆ ಚೂರಿ ಇರಿತ
ಬಂಟ್ವಾಳ, ಜುಲೈ 4: ಆರೆಸ್ಸೆಸ್ ಕಾರ್ಯಕರ್ತನೋರ್ವನ ಮೇಲೆ ತಂಡವೊಂದು ದಾಳಿನಡೆಸಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಿ.ಸಿ.ರೋಡಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸಜಿಪಮುನ್ನೂರು ಗ್ರಾಮದ ಕಂದೂರು ನಿವಾಸಿ ತನಿಯಪ್ಪ ಎಂಬವರ ಮಗ ಶರತ್(28) ಗಾಯಗೊಂಡ ಯುವಕರಾಗಿದ್ದಾರೆ.
ಬಿ.ಸಿ.ರೋಡಿನಲ್ಲಿ ಉದಯಲಾಂಡ್ರಿಯನ್ನು ನಡೆಸುತ್ತಿರುವ ಇವರು ಮಂಗಳವಾರ ರಾತ್ರಿ ಕೆಲಸ ಮುಗಿಸಿ, ಅಂಗಡಿಯಿಂದ ಹೊರಬರುತ್ತಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಚೂರಿ ಇರಿತಕ್ಕೆ ಒಳಗಾದ ಶರತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನಾದ್ಯಂತ 144ಸೆಕ್ಷನ್ ಜಾರಿಯಲ್ಲಿದ್ದರೂ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಇನ್ನೇನು ಪರಿಸ್ಥಿತಿ ತಣ್ಣಗಾಯಿತು ಎನ್ನುತ್ತಿರುವಾಗ ಮೇಲಿಂದ ಮೇಲೆ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಜನರ ಚಿಂತೆ ಹೆಚ್ಚಿಸಿದೆ.
ಘಟನೆ ನಡೆದ ಬೆನ್ನಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಥಳಕ್ಕೆ ದೌಡಾಯಿಸಿದ್ದು, ಬಿ.ಸಿ.ರೋಡ್ ನಗರ ಸೇರಿದಂತೆ ಬಂಟ್ವಾಳದಾದ್ಯಂತ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ. ಚೂರಿ ಇರಿದು ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ.












Click it and Unblock the Notifications