ಕುಕ್ಕೆ ಸುಬ್ರಹ್ಮಣ್ಯ ವಿವಾದ ಬಗೆಹರಿಸಲು ಮಧ್ಯ ಪ್ರವೇಶಿಸಿದ ಆರ್ ಎಸ್ಎಸ್
ಮಂಗಳೂರು, ಅಕ್ಟೋಬರ್.25: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಆರ್ಎಸ್ಎಸ್ ಮಧ್ಯ ಪ್ರವೇಶಿಸಿದೆ. ಈ ವಿವಾದ ಇತ್ಯರ್ಥಕ್ಕೆ ಆರ್ ಎಸ್ಎಸ್ ತಂಡವೊಂದನ್ನು ರಚಿಸಿ ಮಾತುಕತೆಗೆ ಮುಂದಾಗಿದೆ.
ಸುಬ್ರಹ್ಮಣ್ಯ ದೇವಾಲಯ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ವಿವಾದ ಸಂಬಂಧಿಸಿದಂತೆ ನಡೆದ ಬೀದಿಕಾಳಗ ಘಟನೆಯ ಕುರಿತು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಕ್ರಿಯಿಸಿದ್ದಾರೆ.
ಕಲ್ಲಡ್ಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ದೇವಸ್ಥಾನ ಹಾಗೂ ಮಠದ ನಡುವೆ ಇರುವ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಬೇಕಿದೆ . ಈ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯ ಪೇಜಾವರ ಶ್ರೀಗಳು ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ಸ್ವಾಮೀಜಿ ಜೊತೆ ಮಾತುಕತೆ ನಡೆಸುವುದಾಗಿ ಈಗಾಗಲೇ ಹೇಳಿಕೆ ನೀಡಿದ್ದಾರೆ.

ಆದರೆ ಇದಕ್ಕೂ ಮೊದಲೇ ಈ ವಿವಾದದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದು ಅದು ಈಗ ಬೀದಿ ಕಾಳಗ ನಡೆಯುವ ತನಕ ಬಂದಿರುವ ಬೆಳವಣಿಗೆ ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಆರ್ ಎಸ್ಎಸ್ ಕೂಡ ಈ ಸಮಸ್ಯೆ ಬಗೆಹರಿಸಲು ಒಂದು ತಂಡವನ್ನೂ ಈಗಾಗಲೇ ರಚಿಸಿದೆ.
ಆದರೆ ತಂಡ ಈ ವಿವಾದದ ಬಗ್ಗೆ ಮಾತುಕತೆ ನಡೆಸಲು ವಿಳಂಬವಾಗಿದೆ. ಹಿರಿಯರು ಕೂತು ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.












Click it and Unblock the Notifications