ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಎದುರಾಗಿದೆ ಸಂಕಷ್ಟ
ಮಂಗಳೂರು, ಅಕ್ಟೋಬರ್. 24: ಪುತ್ತೂರಿನ ಕೆದಿಲ ಗ್ರಾಮದಲ್ಲಿ 2014, ಸೆಪ್ಟೆಂಬರ್. 1 ರಂದು ನಡೆದ ಶ್ಯಾಂ ಪ್ರಸಾದ್ ಶಾಸ್ತ್ರಿ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಸಂಕಷ್ಟ ಎದುರಾಗಿದೆ.
ಈ ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಶ್ಯಾಂ ಪ್ರಸಾದ್ ಶಾಸ್ತ್ರಿ ಅವರಿಗೆ ಒತ್ತಡ ಹೇರಿದ ಆಡಿಯೋ ಸಹಿತ ಹಲವು ಸಾಕ್ಷಿಗಳನ್ನು ಪುತ್ತೂರು ಕೋರ್ಟ್ ಗೆ ಸಲ್ಲಿಸಿದ್ದರು. ಶ್ಯಾಂ ಪ್ರಸಾದ್ ಶಾಸ್ತ್ರಿ ಅವರಿಗೆ ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಆಡಿಯೋದ ಧ್ವನಿ ಕಲ್ಲಡ್ಕ ಪ್ರಭಾಕರ್ ಭಟ್ ಅವರದ್ದೇ ಎಂದು ಈಗ ದೃಢಪಟ್ಟಿದೆ ಎಂದು ಹೇಳಲಾಗಿದೆ.
ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ದೋಷಾರೋಪಣಾಟ್ಟಿಯಲ್ಲಿ ನಮೂದಿಸಿರುವ ಆಡಿಯೋ ಕಲ್ಲಡ್ಕ ಪ್ರಭಾಕರ ಭಟ್ ಅವರದ್ದೇ ಧ್ವನಿ ಎಂದು ಹೇಳಿದ್ದರು. ಈಗ ವಿಧಿ ವಿಜ್ಞಾನ ಪ್ರಯೋಗಾಲಯ ಕೂಡ ಪ್ರಭಾಕರ ಭಟ್ ಅವರದ್ದೇ ಎಂದು ದೃಢಪಡಿಸಿದೆ.

ಆದರೆ ಇತ್ತೀಚೆಗೆ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಡಾ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಶ್ಯಾಂ ಪ್ರಸಾದ್ ಶಾಸ್ತ್ರಿ ರಾಮಕಥಾ ಗಾಯಕಿಯ ಪತಿಯ ಕಿರಿಯ ಸಹೋದರ ಆಗಿದ್ದರು. ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಪರ ನಿಲ್ಲುವಂತೆ ಶ್ಯಾಂ ಪ್ರಸಾದ್ ಶಾಸ್ತ್ರಿ ಅವರ ಮೇಲೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಪುತ್ತೂರು ಹವ್ಯಕ ವಲಯದ ಅಧ್ಯಕ್ಷ ಶಿವ ಶಂಕರ್ ಭಟ್ ಹಾಗೂ ರಾಘವೇಶ್ವರ ಶ್ರೀ ಅವರು ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿತ್ತು.












Click it and Unblock the Notifications