ವಾಮಂಜೂರು ರೋಹಿಯ ಮಗ ಪವನ್ ರಾಜ್ ಶೆಟ್ಟಿ ಬರ್ಬರ ಕೊಲೆ
ಮಂಗಳೂರು, ಜುಲೈ 25: ರೌಡಿ ಶೀಟರ್ ನನ್ನು ಕೊಚ್ಚಿ ಕೊಲೆಗೈದ ಘಟನೆ ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ನಡೆದಿದೆ.
ರೌಡಿ ಶೀಟರ್ ಆಗಿದ್ದ ವಾಮಂಜೂರು ರೋಹಿ ಮಗ ಪವನ್ ರಾಜ್ ಶೆಟ್ಟಿ(23) ಕೊಲೆಯಾದ ರೌಡಿ. ದ್ವೇಷವೇ ಈ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.

ವಾಮಂಜೂರಿನ ಕುಟ್ಟಿಪಲ್ಕೆ ಲೇ ಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಪವನ್ ನನ್ನು ದುಷ್ಕರ್ಮಿಗಳು ಲಾಂಗ್ ನಿಂದ ಕಡಿದು ಕೊಲೆ ಮಾಡಿದ್ದು, ಈ ಕೃತ್ಯ ಸೋಮವಾರ ತಡರಾತ್ರಿ ನಡೆದಿದೆ. ಮಂಗಳವಾರ ಬೆಳಗ್ಗೆ ಸ್ಥಳೀಯರಿಗೆ ವಿಚಾರ ತಿಳಿದುಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತನ್ನ ತಂದೆ ವಾಮಂಜೂರು ರೋಹಿಯನ್ನು ಕೊಲೆಗೈದ ಆರೋಪಿಗಳನ್ನು ಮುಗಿಸುವ ಪ್ರತಿಜ್ಞೆ ಮಾಡಿದ್ದ ಪವನ್ ರಾಜ್ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು.
ವಾಮಂಜೂರು ರೋಹಿ ಕೊಲೆಯತ್ನದಲ್ಲಿ ಭಾಗಿಯಾಗಿದ್ದರು ಎನ್ನಲಾದ ಜಯಪ್ರಕಾಶ್ ಕೊಲೆಯತ್ನ, ಸಂತೋಷ್ ಕೊಟ್ಟಾರೆ ಕೊಲೆಯತ್ನ ಹಾಗೂ ರೋಹಿ ಕೊಲೆಗೆ ಹಣಕಾಸಿನ ನೆರವು ನೀಡಿದ್ದಾರೆ ಎನ್ನಲಾದ ಒತ್ತುಪಾದೆ ರಹಮಾನ್ ಕೊಲೆಯತ್ನ ಹೀಗೆ ಹಲವು ಪ್ರಕರಣಗಳು ಪವನ್ ಮೇಲೆ ದಾಖಲಾಗಿದ್ದವು.
ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಪವನ್ ಇದೀಗ ಕೊಲೆಯಾಗಿದ್ದಾನೆ. ಕೊಲೆಯಾದ ಸ್ಥಳಕ್ಕೆ ಡಿಸಿಪಿಗಳಾದ ಹನುಮಂತರಾಯ, ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ. ಪವನ್ ರಾಜ್ ನನ್ನು ಕೊಲೆ ಮಾಡಿದ ನಂತರ ದುಷ್ಕರ್ಮಿಗಳು ತಮ್ಮ ಲಾಂಗ್, ಮಚ್ಚನ್ನು ಸ್ಥಳದಲ್ಲೇ ಬಿಟ್ಟುಹೋಗಿದ್ದಾರೆ.












Click it and Unblock the Notifications