ಮಂಗಳೂರು : ರಸ್ತೆ ಅಪಘಾತ ನಿವೃತ್ತ ಡಿವೈಎಸ್ಪಿ ಸಾವು
ಮಂಗಳೂರು, ಜೂ. 02 : ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿವೃತ್ತ ಡಿವೈಎಸ್ಪಿ ಬಿ.ಜೆ. ಭಂಡಾರಿ ಮೃತಪಟ್ಟಿದ್ದಾರೆ. ಉತ್ತಮ ಕರ್ತವ್ಯ ನಿರ್ವಹಣೆಗಾಗಿ ರಾಷ್ಟ್ರಪತಿ ಪದಕ ಹಾಗೂ 2 ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಭಂಡಾರಿ ಅವರು ಪಡೆದಿದ್ದರು.
ಮಂಗಳೂರು ಪಡೀಲ್ ನಿವಾಸಿ 66 ವರ್ಷದ ಜಯ ಭಂಡಾರಿ (ಬಿ.ಜೆ. ಭಂಡಾರಿ) ಮೃತಪಟ್ಟವರು. ಸೋಮವಾರ ಮಧ್ಯಾಹ್ನ ಅವರು ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಬಳಿ ರಸ್ತೆ ದಾಟುವಾಗ ಉಡುಪಿ ಕಡೆಯಿಂದ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. [ಪಿಲಿಕುಳ ನಿಸರ್ಗಧಾಮದ 'ರಾಜ' ಇನ್ನು ನೆನಪು ಮಾತ್ರ]

ಬಿ.ಜೆ. ಭಂಡಾರಿ ಅವರು ಸಂಬಂಧಿಕರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿದ್ದರು. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಎಸ್ಎಂಎಸ್ ಕಾಲೇಜು ಬಳಿಯ ಹೋಟೆಲ್‌ನಲ್ಲಿ ಊಟ ಮುಗಿಸಿ ಹೆದ್ದಾರಿ ದಾಟಲು ನಿಂತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.
ಬಿ.ಜೆ. ಭಂಡಾರಿ ಅವರು ಪ್ರಾಥಮಿಕ ಮತ್ತು ಜೂನಿಯರ್ ಕಾಲೇಜು ಶಿಕ್ಷಣವನ್ನು ಬೆಳ್ತಂಗಡಿಯಲ್ಲಿ, ಪದವಿ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಪಡೆದಿದ್ದರು. ಎಸ್ಐ ಆಗಿ ಪೊಲೀಸ್ ಇಲಾಖೆಗೆ ಸೇರಿದ ಅವರು ಪದೋನ್ನತಿಗೊಂಡು ಡಿವೆಎಸ್ಪಿಯಾಗಿ ನಿವೃತ್ತರಾಗಿದ್ದರು.
ಉತ್ತಮ ಕರ್ತವ್ಯ ನಿರ್ವಹಣೆಗಾಗಿ ರಾಷ್ಟ್ರಪತಿ ಪದಕ ಹಾಗೂ 2 ಬಾರಿ ಮುಖ್ಯಮಂತ್ರಿ ಚಿನ್ನದ ಪದಕವನ್ನು ಪಡೆದಿದ್ದರು. ಮಂಗಳೂರು ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರಾದ ಇವರು, ದಕ್ಷಿಣ ಕನ್ನಡ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸ್ಥಾಪಕರಾಗಿದ್ದರು.












Click it and Unblock the Notifications