ಮೂಡುಬಿದಿರೆ: ಖ್ಯಾತ ಕೃಷಿ ತಜ್ಞ ಡಾ.ಲಿವಿಂಗ್‌ಸ್ಟನ್ ಸಿ.ಸೋನ್ಸ್ ನಿಧನ
ಮಂಗಳೂರು, ಏಪ್ರಿಲ್, 05: ಕೃಷಿ ತಜ್ಞ, "ಕೃಷಿ ಋಷಿ" ಎಂದೇ ಪ್ರಖ್ಯಾತಿ ಪಡೆದಿದ್ದ ಮೂಡುಬಿದಿರೆಯ ಸೋನ್ಸ್ ಫಾರ್ಮ್‍ನ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್ (89)ಅವರು ಬುಧವಾರ (ಏಪ್ರಿಲ್ 05) ಬೆಳಗ್ಗೆ ನಿಧನ ಹೊಂದಿದ್ದಾರೆ.
ಇದೀಗ ಡಾ.ಎಲ್.ಸಿ .ಸೋನ್ಸ್ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ತನ್ನೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡ ಸಹೋದರ ಐ.ವಿ.ಸೋನ್ಸ್ ಅವರನ್ನು ಅಗಲಿದ್ದಾರೆ.

ಡಾ.ಲಿವಿಂಗ್‌ಸ್ಟನ್ ಸಿ.ಸೋನ್ಸ್ ನಡೆದುಬಂದ ಹಾದಿ
1934 ಏಪ್ರಿಲ್ 4ರಂದು ಜನಿಸಿರುವ ಡಾ.ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್ ಮಂಗಳವಾರ (ಏಪ್ರಿಲ್ 04) 89 ವರ್ಷ ಪೂರೈಸಿ 90ಕ್ಕೆ ಕಾಲಿಟ್ಟಿದ್ದರು. ಡಾ.ಎಲ್.ಸಿ.ಸೋನ್ಸ್ ತನ್ನ ಜೀವನವನ್ನು ಕೃಷಿಗಾಗಿ ಮುಡಿಪಾಗಿಟ್ಟವರಾಗಿದ್ದರು. ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಅವರು ಕೃಷಿ, ಬಿದಿರಿನ ವಿವಿಧ ಪ್ರಭೇದ, ದೇಶ-ವಿದೇಶಗಳ ಹಣ್ಣು, ತರಕಾರಿ ಪ್ರಭೇದಗಳನ್ನು ಮೂಡುಬಿದಿರೆ ಬನ್ನಡ್ಕದ ಮಣ್ಣಿನಲ್ಲಿ ಬೆಳೆಯುತ್ತಿದ್ದರು. ಇದರಿಂದ ಉತ್ತಮ ಫಸಲು ಪಡೆದು ಲಾಭ ಗಳಿಸಿದವರಾಗಿದ್ದರು.
ಡಾ.ಲಿವಿಂಗ್‌ಸ್ಟನ್ ಸಿ.ಸೋನ್ಸ್ ಅವರ ಜೀವನ ಶೈಲಿ
ಹೀಗೆ ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ ಇನ್ನಿತರರಿಗೂ ಮಾದರಿ ಆಗಿದ್ದರು. ಜೊತೆಗ ಜಲ ತಜ್ಞರಾಗಿಯೂ ವಿಶೇಷ ಪರಿಣಿತಿಯನ್ನು ಹೊಂದಿದವರಾಗಿದ್ದರು. ಕೃಷಿಯ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದ ಸೋನ್ಸ್ ಅವರು ಹಲವಾರು ಸಂಘ ಸಂಸ್ಥೆಗಳ ಸಕ್ರಿಯ ಪದಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ಅಮೆರಿಕನ್ ಸೊಸೈಟಿ ಆಫ್ ಡೌಸರ್ ಸದಸ್ಯ, ಬ್ರಿಟಿಸ್ ಸೊಸೈಟಿ ಆಫ್ ಡೌಸರ್ ಅಜೀವ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮದ ಸಲಹೆಗಾರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಶ್ರೀಮಹಾವೀರ ವಿಧ್ಯಾವರ್ಧಕ ಸಂಘ, ಶ್ರೀಮಹಾವೀರ ಕಾಲೇಜು ಆಡಳಿತ ಮಂಡಳಿ ಸದಸ್ಯರಾಗಿ, ರೋಟರಿ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕೃಷಿ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಆಲ್ಫ್ರೆಡ್ ಸೋನ್ಸ್ ಫೌಂಡೇಶನ್ ಸ್ಥಾಪಿಸಿ ಗಮನ ಸೆಳೆದಿದ್ದರು.
ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಿಂದ ಉತ್ತಮ ತೋಟಗಾರಿಕಾ ಸಾಧಕ ಪ್ರಶಸ್ತಿ, ಅಮೆರಿಕ ಮೊಟಾನಾ ವಿಶ್ವ ವಿದ್ಯಾಲಯದಿಂದ ವಿಶೇಷ ಹಳೆ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಮೇರಿಕದ ಹಳೇ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಅನ್ಯ ದೇಶದಿಂದ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿಯಾಗಿಯೂ ಹೊರಹೊಮ್ಮಿದ್ದರು.
2006 ಸಾಧಕ ಪ್ರಶಸ್ತಿ, 2004 ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ, ಹಿರಿಯಡ್ಕದ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದಿಂದ ಬೆಸ್ಟ್ ಫಾರ್ಮರ್ ಪ್ರಶಸ್ತಿ, 2010-ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಿಂದ ರಾಷ್ಟ್ರಮಟ್ಟದ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಸನ್ಮಾನ ಸಹಿತ ದೇಶ ವಿದೇಶಗಳ ಹಲವಾರು ಸಂಘ ಸಂಸ್ಥೆಗಳು ಸೋನ್ಸ್ ಅವರ ಸಾಧನೆಯನ್ನು ಗೌರವಿಸಿವೆ. ಇಸ್ರೆಲ್‍ನಲ್ಲಿ ನಡೆದ ವಿಶ್ವ ನೀರಾವರಿ ಸಮ್ಮೇಳನಕ್ಕೆ ಭಾಗವಹಿಸಿ, ಅವುಗಳ ಮಾದರಿಯನ್ನು ಕೂಡ ತಮ್ಮ ಊರಿನಲ್ಲಿ ಪ್ರಯೋಗಿಸಿ ಗಮನ ಸೆಳೆದಿದ್ದರು.












Click it and Unblock the Notifications