ಮಂಗಳೂರು ವಿಮಾನ ನಿಲ್ದಾಣದಲ್ಲಿ ದಾಖಲೆ ಸಂಚಾರ: ಡಿಸೆಂಬರ್‌ನಲ್ಲಿ ಸಂಚರಿಸಿದ ಪ್ರಯಾಣಿಕರ ಸಂಖ್ಯೆ ಎಷ್ಟು ಗೊತ್ತಾ?
ಮಂಗಳೂರು, ಜನವರಿ 06: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2023ರ ಡಿಸೆಂಬರ್ ತಿಂಗಳಲ್ಲಿ ದಾಖಲೆಯ ಪ್ರಯಾಣಿಕರ ಪ್ರಯಾಣವಾಗಿದೆ. ಡಿಸೆಂಬರ್ ಒಂದೇ ತಿಂಗಳಿನಲ್ಲಿ ಬರೋಬ್ಬರಿ 2.03 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.
ಕಳೆದ ಭಾನುವಾರ ಒಂದೇ ದಿನ ಅಂದರೆ ಡಿಸೆಂಬರ್ 31 ವಿಮಾನ ನಿಲ್ದಾಣವು ದಾಖಲೆಯ 7,548 ಪ್ರಯಾಣಿಕರನ್ನು ನಿರ್ವಹಿಸಿದ್ದು, ನವೆಂಬರ್ 25 ರಂದು ಕೂಡಾ 7,468 ಪ್ರಯಾಣಿಕರು ಸಂಚರಿಸಿದ್ದಾರೆ. ಇನ್ನು ಡಿಸೆಂಬರ್ 9-10, 16-17, 23-25 ಮತ್ತು 30-31ರ ವಾರಾಂತ್ಯದಲ್ಲಿ ಏಳು ಸಾವಿರಕ್ಕೂ ಹೆಚ್ಚು ಮಂದಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣ ಮಾಡಿದ್ದಾರೆ.

ಕ್ರಿಸ್‌ಮಸ್‌ವರೆಗಿನ ಮೂರು ದಿನಗಳಲ್ಲಿ ಕ್ರಮವಾಗಿ 7,089, 7,220 ಮತ್ತು 7,034 ಮಂದಿ ಪ್ರಯಾಣಿಸಿದ್ದಾರೆ. ಒಟ್ಟಾರೆ ಡಿಸೆಂಬರ್ ಒಂದೇ ತಿಂಗಳಿನಲ್ಲಿ ಬರೋಬ್ಬರಿ 2.03 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಹಾಗೂ ನವೆಂಬರ್‌ನಲ್ಲಿ 1.78 ಲಕ್ಷ ಪ್ರಯಾಣಿಕರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಭಾಯಿಸಲಾಗಿತ್ತು.
ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ವಿಮಾನ ಯಾನ ಸಂಸ್ಥೆಗಳು ವಿಮಾನ ನಿಲ್ದಾಣದ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಚಳಿಗಾಲದ ವೇಳಾಪಟ್ಟಿ ಜಾರಿಗೆ ಬಂದಾಗ ಅಕ್ಟೋಬರ್ 29 ರಿಂದ ವಾಯು ಸಂಚಾರ ಚಲನೆಗಳಲ್ಲಿ ಸಾಮಾನ್ಯ ಹೆಚ್ಚಳ ಕಂಡುಬಂದಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಅಲ್ಲದೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುತ್ತಿರುವುದರಿಂದ ವಿವಿಧ ಸವಾಲುಗಳು ಹೆಚ್ಚಾಗುತ್ತಿದೆ. ಆದರೆ ಇದರ ಹೊರತಾಗಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವು ವಾಯುಯಾನ ಪ್ರಯಾಣವು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಬೆಳೆಯುತ್ತಿದೆ ಎನ್ನುವುದರ ಸ್ಪಷ್ಟ ಸೂಚನೆಯಾಗಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಈ ಬೆಳವಣಿಗೆಯಲ್ಲಿ ತನ್ನ ಪಾತ್ರವನ್ನು ವಹಿಸಲು ಹೆಮ್ಮೆಪಡುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ: ಇಬ್ಬರ ಬಂಧನ
ಮಂಗಳೂರು: ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕಾಟಿಪಳ್ಳದ ಅಶ್ಪಾಕ್ ಯಾನೆ ಜುಟ್ಟು ಅಶ್ಪಾಕ (27)ಹಾಗೂ ಉಮರ್ ಫಾರೂಕ್ ಇರ್ಫಾನ್ (26) ಬಂಧಿತ ಆರೋಪಿಗಳು.
ಆರೋಪಿಗಳು ಮಂಗಳೂರು ನಗರದ ಹಲವು ಭಾಗಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇತ್ತೀಚಿಗೆ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ರೈಲ್ವೆ ಬ್ರಿಜ್‌ನಿಂದ ಸರಿಪಳ್ಳಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಕಪ್ಪು ಬಣ್ಣದ ಸ್ಕೂಟರ್‌ನಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 19 ಗ್ರಾಂ ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಸೇರಿದಂತೆ ಒಟ್ಟು 1,92,800 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications