ಬೆಂಗಳೂರು-ಮಂಗಳೂರು ರೈಲು ಕೊಯಿಕ್ಕೋಡ್‌ಗೆ ಬೇಡ; ಜೋರಾದ ಧ್ವನಿ
ಮಂಗಳೂರು, ಫೆಬ್ರವರಿ 06: ರೈಲ್ವೆ ಇಲಾಖೆ ಮುಂದೆ ಕರ್ನಾಟಕದ ಕರಾವಳಿ ಭಾಗದ ಜನರು ಇಟ್ಟಿರುವ ಬೇಡಿಕೆ ಕುರಿತು ಧ್ವನಿ ಜೋರಾಗಿದೆ. ಬೆಂಗಳೂರು-ಮಂಗಳೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡುವುದು ಬೇಡ ಎಂದು ಜನಪ್ರತಿನಿಧಿಗಳು ಸಹ ಆಗ್ರಹಿಸಿದ್ದಾರೆ.
ವಿರೋಧದ ನಡುವೆಯೂ ದಕ್ಷಿಣ ರೈಲ್ವೆ ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ಇದಕ್ಕೆ ಕರ್ನಾಟಕ ಕರಾವಳಿ ಭಾಗದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಈಗ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರೈಲನ್ನು ವಿಸ್ತರಣೆ ಮಾಡುವ ಪ್ರಸ್ತಾಪವನ್ನು ಮರು ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಈ ಮೂಲಕ ಪ್ರಯಾಣಿಕರ ಕೂಗಿಗೆ ಧ್ವನಿ ಗೂಡಿಸಿದ್ದಾರೆ.
ನಳಿನ್ ಕುಮಾರ್ ಒತ್ತಾಯ; ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ರೈಲು ನಂಬರ್ 16511/512 ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡುವ ಜನರಿ 23ರ ಪ್ರಸ್ತಾಪ ವಾಪಸ್ ಪಡೆಯಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಸಂಸದರು. ಬೆಂಗಳೂರು-ಮಂಗಳೂರು ಸೆಂಟ್ರಲ್ ರೈಲನ್ನು ಕಣ್ಣೂರು ತನಕ ವಿಸ್ತರಣೆ ಮಾಡಲು ಸಹ ವಿರೋಧವಿತ್ತು. ಈಗ ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ಕರಾವಳಿ ಭಾಗದ ಜನರಿಗೆ ಅನ್ಯಾಯವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ರೈಲು ಇದಾಗಿದೆ. ಈ ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಹಲವಾರು ಜನ ವೈಟಿಂಗ್ ಲಿಸ್ಟ್‌ನಲ್ಲಿ ಕಾಯುತ್ತಾರೆ. ಈ ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ದಕ್ಷಿಣ ಕನ್ನಡ ಭಾಗದ ಜನರಿಗೆ ಅನ್ಯಾಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರು-ಕಣ್ಣೂರು ನಡುವೆ ಎರಡು ರೈಲುಗಳು ಸಂಚಾರ ನಡೆಸುತ್ತಿವೆ. ಆದ್ದರಿಂದ ಬೆಂಗಳೂರು-ಮಂಗಳೂರು ಸೆಂಟ್ರಲ್ ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡುವ ಅಗತ್ಯವೇನಿದೆ? ಎಂದು ಸಂಸದರು ಪ್ರಶ್ನೆ ಮಾಡಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಸಹ ಈ ಕುರಿತು ಮಾತನಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಅವರು, ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡುವ ರೈಲ್ವೆ ಸಚಿವಾಲಯದ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಸಚಿವರು ರೈಲ್ವೆ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ. ರೈಲು ಸೇವೆ ವಿಸ್ತರಣೆ ಮಾಡುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ತೊಂದರೆ ಉಂಟಾಗಲಿದೆ. ರಾತ್ರಿ ಸಂಚಾರ ನಡೆಸುವ ರೈಲು ಇದಾಗಿದ್ದು, ಬೆಂಗಳೂರು, ಮಂಗಳೂರು, ಕಣ್ಣೂರು ಮಾರ್ಗವಾಗಿ ಸಂಚಾರ ನಡೆಸುವ ಏಕೈಕ ರೈಲು ಇದಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ವಿರೋಧ ಏಕೆ?; ಪ್ರಸ್ತಾವನೆಯಂತೆ ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ರೈಲಿನ ವೇಳಾಪಟ್ಟಿ ಬದಲಾಗಲಿದೆ. ಅಲ್ಲದೇ ಮಂಗಳೂರು ಪ್ರಯಾಣಿಕರಿಗೆ ಆಸನದ ಕೊರತೆ ಆಗಲಿದೆ. ಕೇರಳದಿಂದ ರೈಲು ಬರುವಾಗಲೇ ಭರ್ತಿಯಾಗುತ್ತದೆ, ಇದರಿಂದಾಗಿ ಮಂಗಳೂರು-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ತೊಂದರೆಯಾಗುತ್ತದೆ.
ಬೆಂಗಳೂರು-ಮಂಗಳೂರು ನಡುವೆ ಬಸ್ ಪ್ರಯಾಣ ದುಬಾರಿ. ಆದ್ದರಿಂದ ಹೆಚ್ಚಿನ ಜನರು ರೈಲು ಸೇವೆ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಸಮಯದಲ್ಲಿ ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ಅದು ಕೇರಳದ ಜನರಿಗೆ ಅನುಕೂಲವಾಗಲಿದೆ ಎಂಬುದು ಕರಾವಳಿ ಭಾಗದ ಜನರ ವಾದ.
ದಕ್ಷಿಣ ರೈಲ್ವೆ ಬೆಂಗಳೂರು-ಮಂಗಳೂರು-ಕಣ್ಣೂರು ರೈಲನ್ನು ಕೊಯಿಕ್ಕೋಡ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ಆದರೆ ಯಾವಾಗಿನಿಂದ ರೈಲು ಸಂಚಾರ ಎಂದು ಆದೇಶ ಹೊರಡಿಸಿಲ್ಲ. ಆದ್ದರಿಂದ ವಿರೋಧಕ್ಕೆ ಮಣಿದು ವಿಸ್ತರಣೆ ಪ್ರಸ್ತಾಪ ವಾಪಸ್ ಪಡೆಯಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications