'ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಗೆ ರಮಾನಾಥ್ ರೈ ಬೆಂಬಲ'
ಮಂಗಳೂರು, ಸೆಪ್ಟೆಂಬರ್ 2: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನಾಝೀ ಸಿದ್ಧಾಂತದ ಪ್ರತಿಪಾದಕ, ಜಿಲ್ಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಲ್ಲಿ ಜಿಲ್ಲೆಯಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತದೆ. ಈ ಹತ್ಯೆಗಳಿಗೆ ಸಚಿವ ರಮಾನಾಥ್ ರೈ ಪ್ರೇರಣೆ ನೀಡಿದ್ದಾರೆ ಎಂದಾದರೆ ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಲಿದೆ ಎಂದು ಹೇಳಿದರು.
ಸೆಪ್ಟೆಂಬರ್ ಹನ್ನೆರಡರಂದು ಸಚಿವ ರಮಾನಾಥ್ ರೈ ಅವರ ನೇತೃತ್ವದಲ್ಲಿ ನಡೆಯುವ ಸೌಹಾರ್ದ ನಡಿಗೆ ಢೋಂಗಿ ಜಾತ್ಯತೀತ ನಡಿಗೆ ಎಂದು ಅವರು ಕಿಡಿಕಾರಿದರು.

ಸೆಪ್ಟೆಂಬರ್ ಏಳರಂದು ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ ಮೆರವಣಿಗೆಗೆ ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹುಬ್ಬಳ್ಳಿಯಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪಿಎಫ್ಐ, ಎಸ್ ಡಿಪಿಐ ಹಾಗೂ ಕೆಎಫ್ ಡಿ ಸಂಘಟನೆಯನ್ನು ರಾಜ್ಯ ನಿಷೇಧಿಸಬೇಕು. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಹಲ್ಲೆ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು, ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ್ ರೈ ಅವರನ್ನು ಸಂಪುಟದಿಂದ ಈ ಕೂಡಲೇ ವಜಾಗೊಳಿಸುವಂತೆ ಪ್ರತಿಭಟನಾ ಸಭೆ ಮೂಲಕ ಒತ್ತಾಯಿಸಲಾಗುವುದು ಎಂದರು.












Click it and Unblock the Notifications