ಮಂಗಳೂರು ಅಭಿವೃದ್ಧಿಯ ಕನಸು ಹೊತ್ತ ನವ ಕರ್ನಾಟಕ 2025 ಕಾರ್ಯಾಗಾರ
ಮಂಗಳೂರು, ಅಕ್ಟೋಬರ್ 04 : ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಮುನ್ನೋಟಗಳನ್ನು ರೂಪಿಸಲು ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. 'ನವ ಕರ್ನಾಟಕ 2025' ಸಮಗ್ರ ಅಭಿವೃದ್ದಿಯ ನಕಾಶೆ ಕಾರ್ಯಕ್ರಮದಡಿ ಈ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರಮಾನಾಥ ರೈ, 'ಉದ್ಯಮ, ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗಿಂತ ಮುಂದುವರಿದ ಜಿಲ್ಲೆಯೆಂಬ ಹೆಗ್ಗಳಿಕೆಗೆ ನಮ್ಮ ಜಿಲ್ಲೆ ಪಾತ್ರವಾಗಿದೆ. ಈಗ ರೂಪಿಸಲಾಗುವ ಜಿಲ್ಲೆಯ ಅಭಿವೃದ್ಧಿ ಮುನ್ನೋಟವು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಲಿ' ಎಂದು ಹೇಳಿದರು.

ಶಾಸಕ ಜೆ.ಆರ್. ಲೋಬೋ ಮಾತನಾಡಿ, 'ದಕ್ಷಿಣ ಕನ್ನಡ ಜಿಲ್ಲೆ ಬಂದರು ಹಾಗೂ ಮೀನುಗಾರಿಕೆಗೆ ಹೆಸರುವಾಸಿಯಾಗಿದ್ದರೂ, ಈ ಕ್ಷೇತ್ರಗಳೆರಡೂ ನಿರ್ಲಕ್ಷಕ್ಕೆ ಗುರಿಯಾಗಿದೆ. ಐಟಿ ಕ್ಷೇತ್ರಕ್ಕೆ ವಿಫುಲ ಅವಕಾಶವಿದ್ದರೂ ಸಂಪರ್ಕದ ಕೊರತೆಯಿಂದ ಐಟಿ ಸಂಸ್ಥೆಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿವೆ' ಎಂದರು.
'ಪಡುಬಿದ್ರೆಯಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಕಾರ್ಯ ಯೋಜನೆ ರೂಪಿಸುವ ಬದಲು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಯೊಂದಿಗೆ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಪ್ರತಿ ಶಾಲಾ ಕಾಲೇಜುಗಳಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಗೈಡ್ಸ್‌ಗೆ ಮಕ್ಕಳ ಸೇರ್ಪಡೆಗೆ ಅವಕಾಶ ಸಿಗಬೇಕು. ಸಂಚಾರ ನಿಯಂತ್ರಣ, ಇ ಆಡಳಿತಕ್ಕೆ ಆದ್ಯತೆ ನೀಡಬೇಕು' ಎಂದು ಜೆ.ಆರ್.ಲೋಬೋ ಹೇಳಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕವನ್ನು 2025ರ ವೇಳೆಗೆ ಮುಂಚೂಣಿಗೆ ಕರೆದೊಯ್ಯಲು ಪ್ರತಿ ನಾಗರಿಕರ ಆಲೋಚನೆಗಳನ್ನು ಹಂಚಿಕೊಳ್ಳಲು ಈ ಜಿಲ್ಲಾ ಮಟ್ಟದ ಕಾರ್ಯಾಗಾರದ ಮೂಲಕ ಅವಕಾಶ ಕಲ್ಪಿಸಿದ್ದಾರೆ' ಎಂದು ಹೇಳಿದರು.
'ಈ ಮುನ್ನೋಟ ಕೈಪಿಡಿ ಯೋಜನೆ 5 ತಿಂಗಳವರೆಗೆ ನಡೆಯಲಿದೆ. ಡಿಸೆಂಬರ್ 31ಕ್ಕೆ ಈ ಕೈಪಿಡಿಯನ್ನು ಪೂರ್ಣಗೊಳಿಸಲಾಗುತ್ತದೆ. ಜಿಲ್ಲಾ ಮಟ್ಟದ ಚರ್ಚೆಗಳಲ್ಲಿ ಮುಂದಿನ 7 ವರ್ಷಗಳಲ್ಲಿ ಕರ್ನಾಟಕದ ಅಭಿವೃದ್ಧಿಯಲ್ಲಿ ಏನು ಆಗಬೇಕೆಂದು ಬಯಸುತ್ತೀರಿ? ಎಂಬ ಪ್ರಶ್ನೆಗಳಿವೆ' ಎಂದರು.












Click it and Unblock the Notifications