7ನೇ ಮಹಡಿಯಿಂದ ಬಿದ್ದ ಪರ್ಶಿಯನ್ ಬೆಕ್ಕು ರಕ್ಷಿಸಿದ ರಜನಿ
ಮಂಗಳೂರು, ಜೂನ್ 14: ಬೀದಿನಾಯಿಗಳ ಪಾಲಿಗೆ ಅನ್ನಪೂರ್ಣೆಯಾಗಿರುವ ಮಂಗಳೂರಿನ ರಜನಿ ಶೆಟ್ಟಿ ಮತ್ತೆ ಮೂಕ ಪ್ರಾಣಿಗಳನ್ನು ರಕ್ಷಣೆ ಮಾಡುವ ಮೂಲಕ ಸಾಧನೆ ಮೆರದಿದ್ದಾರೆ. ರಜನಿ ಶೆಟ್ಟಿ ಮಂಗಳೂರು ನಗರದ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ನಾಲ್ಕನೇ ಮಹಡಿಗೆ ಹಗ್ಗದ ಸಹಾಯದಿಂದ ಇಳಿದು ಸಾಹಸ ಮೆರೆದು ಬೆಕ್ಕು ರಕ್ಷಿಸಿದ್ದಾರೆ.
ಕೊಡಿಯಾಲ್ ಗುತ್ತುವಿನ ಎಂಪಾಯರ್ ಮಾಲ್ ಹಿಂಭಾಗದ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಬಿದ್ದ ಪರ್ಷಿಯನ್ ತಳಿಯ ಬೆಕ್ಕೊಂದು ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ಸಿಲುಕಿಕೊಂಡಿತ್ತು. ಬೆಕ್ಕಿನ ಪೋಷಕರು ಬೆಳಗ್ಗಿನ ಹೊತ್ತು ಎಲ್ಲರೂ ಕೆಲಸಕ್ಕೆ ಹೋಗುತ್ತಾರೆ. ಈ ಸಂದರ್ಭ ಬೆಕ್ಕು ಮನೆಯಿಂದ ಹೊರಗಡೆ ಬಂದು ಆಕಸ್ಮಿಕವಾಗಿ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದಿದೆ. ಆದರೆ ಅಲ್ಲಿಂದ ಹೊರಬರಲು ಅವಕಾಶವಿಲ್ಲದೆ ಬೆಕ್ಕು ಅಲ್ಲಿಯೇ ಇತ್ತು.
ರಾತ್ರಿ ಮನೆಯವರು ಬಂದು ನೋಡಿದಾಗಲೇ ಬೆಕ್ಕು ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ಸಿಲುಕಿಕೊಂಡಿರುವುದು ತಿಳಿದು ಬಂದಿದೆ. ತಕ್ಷಣ ಮನೆಯವರು ರಜನಿ ಶೆಟ್ಟಿಯವರನ್ನು ಸಂಪರ್ಕಿಸಿದ್ದಾರೆ. ಮರುದಿನ ಬೆಳಗ್ಗೆ ಅವರು ಅಲ್ಲಿಗೆ ಹೋಗಿದ್ದಾರೆ. ಆದರೆ ಬಾಲ್ಕನಿಯಿಂದ ಬೆಕ್ಕನ್ನು ರಕ್ಷಿಸುವುದು ಸುಲಭದ ಮಾತಾಗಿರಲಿಲ್ಲ.
ಆದ್ದರಿಂದ ರಜನಿ ಶೆಟ್ಟಿಯವರು ಏಳನೇ ಮಹಡಿಯಿಂದ ಸೊಂಟಕ್ಕೆ ಹಗ್ಗವನ್ನು ಕಟ್ಟಿ ನಾಲ್ಕನೇ ಮಹಡಿಯ ಗ್ಯಾಲರಿಗೆ ಇಳಿದು ಹರಸಾಹಸಪಟ್ಟು ಬೆಕ್ಕನ್ನು ರಕ್ಷಿಸಿ ಮನೆಯವರಿಗೆ ಒಪ್ಪಿಸಿದ್ದಾರೆ. ರಜನಿ ಶೆಟ್ಟಿಯವರು ಈ ಹಿಂದೆಯೂ ಬಾವಿಗೆ ಬಿದ್ದಿರುವ, ತೊಂದರೆಗೆ ಸಿಲುಕಿರುವ ನಾಯಿ, ಬೆಕ್ಕು ಸೇರಿದಂತೆ ಇನ್ನಿತರ ಮೂಕ ಪ್ರಾಣಿಗಳನ್ನು ರಕ್ಷಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ನಾಯಿ ರಕ್ಷಿಸಲು 45 ಅಡಿ ಬಾವಿಗೆ ಇಳಿದಿದ್ದ ರಜನಿ
ಶ್ವಾನಪ್ರಿಯೆ ಆಗಿರುವ ರಜನಿ ಹಿಂದೊಮ್ಮೆ 45 ಅಡಿ ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ರಕ್ಷಿಸಿದ್ದರು. ಬಿಜೈ ನ್ಯೂ ರೋಡ್ ಬಳಿಯ ಮನೆಯೊಂದರ ಬಾವಿಗೆ ರಾತ್ರಿ ಸಮಯ ಬಿದ್ದಿದ್ದ ಶ್ವಾನವನ್ನು ಮೇಲಕ್ಕೆ ಬರಲು ನೆರವಾಗಿದ್ದರು. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದಿದ್ದ ರಜನಿ, ಶ್ವಾನಕ್ಕೂ ಹಗ್ಗ ಕಟ್ಟಿ ಅದನ್ನು ಮೇಲಕ್ಕೆ ತರುವ ಮೂಲಕ ಪ್ರಾಣ ಉಳಿಸಿ ಶ್ವಾನಪ್ರಿಯರ ಮನಗೆದ್ದಿದ್ದರು.

ಪ್ರಾಣಿ ಪಕ್ಷಿಗಳಿಗೆ ರಜನಿ ಮನೆಯೇ ಅರಮನೆ
ಮುಂಬೈ ಮೂಲದ ರಜನಿ ಶೆಟ್ಟಿಯವರು ದಾಮೋದರ ಶೆಟ್ಟಿ ಎಂಬುವವರನ್ನು ವಿವಾಹವಾಗಿದ್ದು, ಸದ್ಯ ಮಂಗಳೂರಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ದಾಮೋದರ್ ಶೆಟ್ಟಿ ವೃತ್ತಿಯಲ್ಲಿ ಡ್ರೈವರ್ ಆಗಿದ್ದು, ಈ ದಂಪತಿ ಮೂವರು ಮಕ್ಕಳನ್ನು ಹೊಂದಿದ್ದಾರೆ. ರಜನಿ ಶೆಟ್ಟಿ ಕುಟುಂಬ ನಂಬಿಕೊಂಡಿರುವುದು ಪತಿಯ ದುಡಿಮೆಯನ್ನೇ. ಆದರೂ ರಜನಿ ಶೆಟ್ಟಿಯವರ ಮನೆಯಲ್ಲಿ 40ಕ್ಕೂ ಶ್ವಾನಗಳು, 15 ಬೆಕ್ಕುಗಳು, 4 ಹದ್ದುಗಳಿವೆ. ಇವೆಲ್ಲವೂ ಬೀದಿಯಲ್ಲಿ ಯಾರೋ ಬಿಟ್ಟು ಹೋಗಿರುವುದು ಮತ್ತು ರಸ್ತೆಯಲ್ಲಿ ಗಾಯವಾಗಿ ಬಿದ್ದಿರುವುದು. ಕಷ್ಟದ ಜೀವನದ ನಡುವೆಯೇ ರಜನಿ ಶೆಟ್ಟಿ ಮನೆ ಪ್ರಾಣಿಗಳಿಗೆ ಅರಮನೆಯಾಗಿದೆ.

ಬೀದಿನಾಯಿಗಳಿಗೆ ಆಹಾರ
ಹಸಿದ ಮನುಷ್ಯರಿಗೆ ಯಾರಾದರೂ ಊಟ ಹಾಕುತ್ತಾರೆ. ಆದರೆ ಹಸಿದ ಬೀದಿ ನಾಯಿಗಳಿಗೆ ಯಾರು ಊಟ ಹಾಕುತ್ತಾರೆ ಎಂಬ ಜಿಜ್ಞಾಸೆಯಿಂದ ರಜನಿ ಪ್ರತಿದಿನ ಸುಮಾರು 600 ಬೀದಿನಾಯಿಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಈಕೆಯ ವಾಹನ ಕೇಳಿದರೆ ಸಾಕು ಎಲ್ಲಾ ಶ್ವಾನಗಳು ಇವರನ್ನು ಸುತ್ತುವರಿದುಕೊಳ್ಳುತ್ತವೆ. ಇನ್ನು ಇವರ ಮನೆಯಲ್ಲಿಯೂ 40ಕ್ಕೂ ಹೆಚ್ಚು ಶ್ವಾನಗಳಿದ್ದು, ಅವುಗಳ ಸ್ನಾನ, ಆರೈಕೆ, ಔಷಧೋಪಚಾರಗಳನ್ನು ರಜನಿ ಶೆಟ್ಟಿಯವರು ಮಾಡುತ್ತಾರೆ.

ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಪ್ರಶಂಸೆ
ರಜನಿ ಶೆಟ್ಟಿಯವರ ಈ ಮಾತೃ ಹೃದಯಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಜನಿ ಶೆಟ್ಟಿಯವರ ಸಾಧನೆಗಾಥೆಯನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದ ಲಕ್ಷ್ಮಣ್, "ಮಂಗಳೂರು ಮೂಲದ ರಜನಿ ಶೆಟ್ಟಿ ಪ್ರತಿ ದಿನ ಸ್ವತಃ ಅಡಿಗೆ ಮಾಡಿ ನೂರಾರು ಪ್ರಾಣಿಗಳಿಗೆ ಆಹಾರ ನೀಡುತ್ತಾರೆ. ಬಾವಿಗಳಿಗೆ ಪ್ರಾಣಿಗಳು ಬಿದ್ದರೆ ಬಾವಿಗಿಳಿದು ರಕ್ಷಣೆ ಮಾಡುತ್ತಾರೆ. ಅನಾರೋಗ್ಯ ಹೊಂದಿದ, ಗಾಯಗೊಂಡ ಬೀದಿ ನಾಯಿಗಳಿಗೆ ಆರೈಕೆ ಮಾಡುತ್ತಾರೆ. ರಜನಿ ಶೆಟ್ಟಿಯವರ ಅದ್ಭುತ ಸೇವೆಗೆ ತಲೆ ಬಾಗುತ್ತೇನೆ" ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮೂಲಕ ಪ್ರಶಂಸಿಸಿದ್ದರು.












Click it and Unblock the Notifications