ಬ್ಯಾರಿ ಅಕಾಡೆಮಿ ಅಧ್ಯಕ್ಷ ಸ್ಥಾನ ರದ್ದು; ರಹೀಂ ಉಚ್ಚಿಲ ಪ್ರತಿಕ್ರಿಯೆ
ಮಂಗಳೂರು, ಏಪ್ರಿಲ್ 06; ರಾಜ್ಯದಲ್ಲಿ ಧರ್ಮ ಸಂಘರ್ಷ ಪ್ರಕರಣಗಳು ಒಂದರ ಮೇಲೊಂದು ನಡೆಯುತ್ತಿರುವಾಗಲೇ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ಮಂಗಳೂರಿನ ರಹೀಂ ಉಚ್ಚಿಲರನ್ನು ಸರ್ಕಾರ ಏಕಾಏಕಿ ಪದಚ್ಯುತಿಗೊಳಿಸಿದೆ.
ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಆರ್. ರಮೇಶ್ ರಹೀಂ ಉಚ್ಚಿರನ್ನು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸುವಂತೆ ಆದೇಶಿಸಿದ್ದಾರೆ.
ಸರ್ಕಾರದ ಧಿಡೀರ್ ಆದೇಶದ ಬಗ್ಗೆ ರಹೀಂ ಉಚ್ಚಿಲ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಆದೇಶದ ಪ್ರತಿ ನೋಡಿದ್ದೇನೆ. ಕನ್ನಡ ಸಂಸ್ಕೃತಿ ಇಲಾಖೆ ನನ್ನನ್ನು ಪದಮುಕ್ತಗೊಳಿಸಿದೆ.ಯಾಕೆ ಅಂತಾ ನನಗೂ ಗೊತ್ತಿಲ್ಲ. ಆ ಆದೇಶ ಪತ್ರದಲ್ಲೂ ಕಾರಣ ತಿಳಿಸಿಲ್ಲ. ನಾನೂ ಕಾರಣದ ಹುಡುಕಾಟದಲ್ಲಿದ್ದೇನೆ" ಎಂದರು.

"ಕಾರಣ ಹೇಳಿದರೆ ಆತ್ಮಾವಲೋಕನ ಮಾಡಲು ಒಳ್ಳೆಯದು. ಕಾರಣ ಹೇಳದೇ ಪದಮುಕ್ತಗೊಳಿಸಿದ್ದಾರೆ. ಸರ್ಕಾರ ಮತ್ತು ಪಕ್ಷದ ಆದೇಶವನ್ನು ಪಾಲನೆ ಮಾಡುತ್ತೇನೆ. ನನಗೆ ಎರಡೂವರೆ ವರ್ಷ ಅಕಾಡೆಮಿ ಅಧ್ಯಕ್ಷರಾಗಲು ಅವಕಾಶ ನೀಡಿದ್ದಾರೆ. ಅವಕಾಶ ಕೊಟ್ಟ ಸರ್ಕಾರ ಮತ್ತು ಪಕ್ಷಕ್ಕೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳೀದರು.
"ಸರ್ಕಾರದ ಆದೇಶದ ಬಗ್ಗೆ ಯಾವುದೇ ಬೇಸರ ಇಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಕಾರಣ ಏನು ಅಂತಾ ಗೊತ್ತಾಗಿಲ್ಲ. ನಾನು ಪಕ್ಷ, ಸರ್ಕಾರಕ್ಕೆ ಮುಜುಗುರ ಆಗುವಂತೆ ವರ್ತಿಸಿಲ್ಲ. ಅಕಾಡೆಮಿಯ ಕೆಲಸ ಕಾರ್ಯದಲ್ಲಿ ಭ್ರಷ್ಟಾಚಾರ ಮಾಡಿಲ್ಲ. ಏನು ಮಾಡದಿದ್ದರೂ ಏಕಾಏಕಿ ಪದಮುಕ್ತಿ ಗೊಳಿಸಿರುವ ಬಗ್ಗೆ ಗೊಂದಲದಲ್ಲಿದ್ದೇನೆ" ಎಂದು ತಿಳಿಸಿದರು.
"ನಾನು ಕೇಳಿ ತಿಳಿಯುವ ಪ್ರಯತ್ನ ಮಾಡಿದ್ದೇನೆ. ಪಕ್ಷದಲ್ಲಿ ಕೂಡಾ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೀರಿ ಅಂತಾ ಯಾರೂ ಹೇಳಿಲ್ಲ. ಸರ್ಕಾರದ ಮುಖ್ಯಸ್ಥರೂ ಯಾವುದೇ ಕಾರಣವನ್ನೂ ಹೇಳಿಲ್ಲ. ನನಗೂ ಈ ಆದೇಶದಲ್ಲಿ ಏನೂ ಅರ್ಥ ಆಗುತ್ತಿಲ್ಲ. ನನಗೇ ಗೊತ್ತಿಲ್ಲದೇ ಅಕಾಡೆಮಿ ಅಧ್ಯಕ್ಷ ಆಗಿ ನೇಮಕ ಆದೆ. ಗೊತ್ತಿಲ್ಲದೆಯೇ ಆಗಿಯೇ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷನೂ ಆದೆ. ಈಗಲೂ ಸೂಚನೆಯೇ ಇಲ್ಲದೇ ಪದಮುಕ್ತಗೊಳಿಸಲಾಗಿದೆ. ನಾನೂ ಕಾರಣದ ಹುಡುಕಾಟದಲ್ಲಿದ್ದೇನೆ. ಏನಾದರೂ ಕಾರಣ ಇರಬಹುದು ಹುಡುಕಾಟದಲ್ಲಿದ್ದೇನೆ" ಎಂದರು.
"ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಭಾಗವಾಗಿ ನನನ್ನು ಪದಮುಕ್ತಗೊಳಿಸಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ನಾನು ಮುಸಲ್ಮಾನ ಅಂತಾ ನನ್ನನ್ನು ಅಕಾಡೆಮಿಯಿಂದ ತೆಗೆದಿದ್ದಾರೆ ಎನ್ನುವುದನ್ನು ಒಪ್ಪಲ್ಲ. ನಾನು 17 ವರ್ಷಗಳಿಂದ ಮುಸಲ್ಮಾನನಾಗಿ ಭಾಜಪಾದಲ್ಲಿದ್ದೇನೆ. ನನಗೆ ಪಕ್ಷ ಎಲ್ಲಾ ಅವಕಾಶಗಳನ್ನು ನೀಡಿದೆ. ಬೇರೆ ರಾಜ್ಯಗಳಿಗೂ ಪಕ್ಷ ಪ್ರಭಾರಿಯಾಗಿ ಕಳುಹಿಸಿತ್ತು. ಪಕ್ಷ ಜವಾಬ್ದಾರಿಗಳನ್ನು ಕೊಡುವಾಗ ಪಕ್ಷಕ್ಕೆ ನಾನು ಮುಸಲ್ಮಾನ ಅಂತಾನೇ ಗೊತ್ತಿತ್ತು. ನನ್ನ ಧರ್ಮದ ಕಾರಣಕ್ಕಾಗಿ ನನ್ನನ್ನು ಪದಮುಕ್ತಗೊಳಿಸಲಾಗಿದೆ ಅನ್ನೋದು ಸತ್ಯಕ್ಕೆ ದೂರವಾದದ್ದು. ಇತ್ತೀಚಿಗೆ ನಡೆದ ಬೆಳವಣಿಗಗಳಲ್ಲೂ ಸರ್ಕಾರದ ಪರ ಮಾತನಾಡಿದ್ದೇನೆ. ಹಾಗಾಗಿ ಅದೇ ಕಾರಣ ಅನ್ನೋದನ್ನು ಒಪ್ಪುವುದಿಲ್ಲ" ಎಂದು ರಹೀಂ ಉಚ್ಚಿಲ ಸ್ಪಷ್ಟಪಡಿಸಿದರು.












Click it and Unblock the Notifications