ಮೇ 5 ರಂದು ಮಂಗಳೂರಿಗೆ ನರೇಂದ್ರ ಮೋದಿ ಭೇಟಿ
ಮಂಗಳೂರು, ಮೇ 02: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ತಾರಾ ಪ್ರಚಾರಕರ ಅಬ್ಬರ ಮುಗಿಲು ಮಟ್ಟಿದೆ. ಇತ್ತೀಚಿಗಷ್ಟೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಬಾರಿ ಪ್ರವಾಸ ಕೈಗೊಂಡು ಪ್ರಚಾರ ನಡೆಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಸರದಿ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರವಷ್ಟೇ ಶ್ರೀಕೃಷ್ಣನ ನಾಡು ಉಡುಪಿಗೆ ಭೇಟಿ ನೀಡಿ ಚುನಾವಣೆಯ ಪಾಂಚಜನ್ಯ ಮೊಳಗಿಸಿದ್ದಾರೆ . ಈ ಹಿನ್ನೆಲೆಯಲ್ಲಿ ಕರಾವಳಿಯ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿದ್ದು ಉಡುಪಿಯ ಮೂಲೆ ಮೂಲೆಗಳಿಗೆ ಬಿಜೆಪಿ ಕಾರ್ಯಕರ್ತರ ತಂಡ ತೆರಳಿ ಪ್ರಚಾರ ಆರಂಭಿಸಿದೆ.
ಪ್ರಧಾನಿ ಮೋದಿ ಮತ್ತೆ ಕರಾವಳಿಗೆ ಭೇಟಿ ನೀಡಲಿದ್ದಾರೆ. ಇದೇ ಬರುವ ಮೇ 5 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಅಂದು ನಗರದ ಕೇಂದ್ರ ಮೈದಾನದಲ್ಲಿ ಬೃಹತ್ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ. ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿರುವ ಬಂಡಾಯ ಶಮನಕ್ಕೆ ಬಿಜೆಪಿ ಮುಖಂಡರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋದಿ ಪ್ರಚಾರದ ಬಳಿಕ ಚುನಾವಣೆಯ ಚಿತ್ರಣವೇ ಬದಲಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications