ಸೆ.2ಕ್ಕೆ ಮಂಗಳೂರಿಗೆ ಪ್ರಧಾನಿ ಮೋದಿ ಆಗಮನ: ಎಸ್‌ಪಿಜಿಯಿಂದ ಭದ್ರತೆ ಪರಿಶೀಲನೆ
ಮಂಗಳೂರು, ಆಗಸ್ಟ್, 30: ಸೆಪ್ಟೆಂಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಎಸ್‌ಪಿಜಿ ತಂಡ ಬಿಗಿ ಭದ್ರತೆಯ ವ್ಯವಸ್ಥೆಗೆ ಆಗಮಿಸಿದೆ. ಈ ಎಸ್‌ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ತಂಡದಲ್ಲಿ ಡಿಜಿಐ ರ‍್ಯಾಂಕ್‌ನ ಅಧಿಕಾರಿ ಸೇರಿದಂತೆ 7 ಜನ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿದೆ. ಮಂಗಳವಾರ ಮತ್ತೆ ಭದ್ರತಾ ಪಡೆಯ ಇನ್ನಷ್ಟು ಜನ ಬರಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದೆಹಲಿಯಿಂದ ಎಸ್‌ಪಿಜಿ ತಂಡ ಆಗಮನ
ನಿನ್ನೆ ಆಗಮಿಸಿರುವ ತಂಡ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಭದ್ರತಾ ವ್ಯವಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಪ್ರಧಾನಿ ಅವರ ಆಗಮನದ ವೇಳೆ ಭದ್ರತಾ ಶಿಷ್ಟಾಚಾರದ ಬಗ್ಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ಎನ್ಎಂಪಿಟಿಗೂ ತೆರಳಿ ಪರಿಶೀಲನೆ ನಡೆಸಿರುವ ತಂಡ ಎನ್ಎಂಪಿಟಿ ಅಧ್ಯಕ್ಷ ಹಾಗೂ ಅಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳೊಂದಿಗೂ ಸಭೆ ನಡೆಸಿದೆ. ಸಾರ್ವಜನಿಕ ಸಭೆ ನಡೆಯುವ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನಕ್ಕೂ ಭೇಟಿ ನೀಡಿದ ಎಸ್‌ಪಿಜಿ ತಂಡ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದೆ. ಕೆಲವೊಂದು ಬದಲಾವಣೆ ಆಗಬೇಕೆಂದು ಸೂಚಿಸಿದೆ. ಅಲ್ಲದೆ ಈ ತಂಡ ಇಡೀ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದ್ದು, ಸಮಾವೇಶ ಮುಗಿಯುವವರೆಗೂ ಮೈದಾನದ ಸುತ್ತಮುತ್ತ ಹದ್ದಿನ ಕಣ್ಗಾವಲು ಇರಿಸಲಿದೆ.
ಮೋದಿ ಭೇಟಿ ವೇಳೆ ಸಂಸದ ಕಟೀಲ್ ವಿರುದ್ಧ ಬೃಹತ್ ಜನಾಕ್ರೋಶಕ್ಕೆ ಸಿದ್ಧತೆ
ಪ್ರಧಾನಿ ಮೋದಿ ಭೇಟಿ ಸಮಯ ಬದಲಾವಣೆ
ಇನ್ನು ಪ್ರಧಾನಿ ಮೋದಿ ಅವರು ಮಂಗಳೂರು ಭೇಟಿ ಕಾರ್ಯಕ್ರಮದ ಸಮಯ ಬದಲಾವಣೆ ಆಗಿದೆ. ಸೆಪ್ಟೆಂಬರ್ 2ರಂದು ಮಧ್ಯಾಹ್ನ 1ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ತಿಳಿಸಿದರು.
ಕೊಚ್ಚಿಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸುವ ಅವರು ಎನ್ಎಂಪಿಎಗೆ ಆಗಮಿಸಲಿದ್ದಾರೆ. ಅಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ.
ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಗೆ ಆಗಮನ
ಬಳಿಕ ರಸ್ತೆ ಮಾರ್ಗವಾಗಿ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಲಕ್ಷಾಂತರ ಕಾರ್ಯಕರ್ತರು, ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಂಟು ವಿಧಾನಸಭಾ ಕ್ಷೇತ್ರದಿಂದ ಲಕ್ಷಾಂತರ ಮಂದಿ ಕಾರ್ಯಕರ್ತರು ಬರಲಿದ್ದಾರೆ. ಈಗಾಗಲೇ 1,461 ಬಸ್, 200 ಟೆಂಪೋ ಟ್ರಾವೆಲ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಜಿಲ್ಲಾಡಳಿತ 70 ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳನ್ನು ಗುರುತಿಸಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ.

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಕಾರ್ಯಕ್ರಮದ ಶೇಕಡಾ 80% ಪೂರ್ವ ಸಿದ್ಧತೆ ಆಗಿದೆ. ಕಾರ್ಯಕರ್ತರು ಮಧ್ಯಾಹ್ನ 11:30ರ ಒಳಗಡೆ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಸೂಚನೆ ನೀಡಿದ್ದಾರೆ.