ಮಂಗಳೂರಿಗೆ ರಾಷ್ಟ್ರಪತಿ ಕೋವಿಂದ್ ಆಗಮನ; ಸಂಚಾರದಲ್ಲಿ ಬದಲಾವಣೆ
ಮಂಗಳೂರು, ಅಕ್ಟೋಬರ್ 7: ರಾಷ್ಟ್ರಪತಿ ರಾಮನಾಥ ಕೋವಿಂದ್ ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದು, ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಮೈಸೂರಿನಿಂದ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿಯವರನ್ನು ಸರಕಾರಿ ಗೌರವದೊಂದಿಗೆ ಬರಮಾಡಿಕೊಳ್ಳಲಾಯಿತು.
ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವಿಮಾನ ನಿಲ್ದಾಣದಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಪೊಲೀಸರು ವಿಶೇಷ ಭದ್ರತೆ ಒದಗಿಸಿದ್ದರು. ರಾಷ್ಟ್ರಪತಿಯವರೊಂದಿಗೆ ಪತ್ನಿ ಹಾಗೂ ಪುತ್ರಿ ಕೂಡ ಆಗಮಿಸಿದ್ದಾರೆ.

ಪೊಲೀಸ್ ಬಿಗಿ ಭದ್ರತೆಯಲ್ಲಿ ಆಗಮಿಸಿದ ರಾಷ್ಟ್ರಪತಿಗಳು ಹಾಗೂ ಅವರ ಕುಟುಂಬ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಕೂಡ ಜೊತೆಗಿದ್ದಾರೆ.
ವಾಹನ ಸಂಚಾರ ನಿಷೇಧ
ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸರ್ಕ್ಯೂಟ್ ಹೌಸ್‌ನ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮಾರ್ಪಾಡು ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಅ.7ರಂದು ಸಂಜೆ 6 ಗಂಟೆಯಿಂದ ಅ.8ರಂದು ಬೆಳಗ್ಗೆ 11 ಗಂಟೆವರೆಗೆ ವಾಹನ ಸಂಚಾರವನ್ನು ನಿಷೇಧಿಸಿ, ರಸ್ತೆ ಮಾರ್ಗ ಬದಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ- 66ರ ಕೆಪಿಟಿ ಜಂಕ್ಷನ್‌ನಿಂದ ಸರ್ಕ್ಯೂಟ್ ಹೌಸ್ ಜಂಕ್ಷನ್ ಮುಖಾಂತರ ಬಿಜೈನ ಬಟ್ಟಗುಡ್ಡದ ರಸ್ತೆಯಲ್ಲಿ ಸಂಚರಿಸುವ ಎಲ್ಲ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿ, ಕೆಲವು ಮಾರ್ಗದಲ್ಲಿ ಸಂಚರಿಸುವಂತೆ ಮಾರ್ಪಾಡುಗೊಳಿಸಿ, ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.
ಕೆಪಿಟಿಯಿಂದ ಸರ್ಕ್ಯೂಟ್ ಹೌಸ್ ಜಂಕ್ಷನ್- ಬಟ್ಟಗುಡ್ಡೆ ಮೂಲಕ ನಗರಕ್ಕೆ ಪ್ರವೇಶಿಸುವ ವಾಹನಗಳು ನಂತೂರು ಜಂಕ್ಷನ್ ಮೂಲಕ ನಗರ ಪ್ರವೇಶಿಸಬೇಕು.
ಕೆಎಸ್‌ಆರ್‌ಟಿಸಿ, ಬಿಜೈ ಬಟ್ಟಗುಡ್ಡೆ ಕಡೆಯಿಂದ ಕೆಪಿಟಿ ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಂಚರಿಸುವ ವಾಹನಗಳು, ಕುಂಟಿಕಾನ ಮೂಲಕ ರಾಷ್ಟ್ರೀಯ ಹೆದ್ದಾರಿ ಕಡೆಗೆ ಚಲಿಸುವುದು.
ಬಂಟ್ಸ್ ಹಾಸ್ಟೆಲ್ ಸರ್ಕಲ್, ಕದ್ರಿ ಕಂಬಳ ರಸ್ತೆ, ಬಿಜೈ ಬಟ್ಟಗುಡ್ಡೆ ಮುಖಾಂತರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೆಪಿಟಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಬಂಟ್ಸ್ ಹಾಸ್ಟೆಲ್ ಸರ್ಕಲ್- ಮಲ್ಲಿಕಟ್ಟೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿನ ನಂತೂರು ಜಂಕ್ಷನ್ ಮುಖಾಂತರ ಮುಂದುವರಿಯಬೇಕು.
ಈ ತಾತ್ಕಾಲಿಕ ಅಧಿಸೂಚನೆಯು ಗೌರವಾನ್ವಿತ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಬೆಂಗಾವಲು ವಾಹನಗಳು ಹಾಗೂ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಅನ್ವಯಿಸುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಶೃಂಗೇರಿಗೆ ಭೇಟಿ
ಶುಕ್ರವಾರ ರಾಷ್ಟ್ರಪತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಲಿದ್ದಾರೆ. ಮಂಗಳೂರು ನಗರದಿಂದ ಹೆಲಿಕಾಪ್ಟರ್ ಮೂಲಕ ನೇರವಾಗಿ ಶೃಂಗೇರಿಗೆ ತೆರಳಲಿದ್ದಾರೆ.












Click it and Unblock the Notifications