ಚುನಾವಣಾ ಅಧಿಕಾರಿಗಳಿಗೆ ಬೆದರಿಕೆ;ಬಾರ್ ಅಸೋಸಿಯೇಷನ್ ಅಧ್ಯಕ್ಷ ಅಂದರ್
ಉಡುಪಿ, ಏಪ್ರಿಲ್ 07:ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಟ್ಟುನಿಟ್ಟಾಗಿ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಕಾನೂನು ಸುವ್ಯವಸ್ಥೆ ಸೇರಿದಂತೆ ಅಕ್ರಮ ಮದ್ಯ ಸರಬರಾಜು ಚಟುವಟಿಕೆಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ರಚಿಸಲಾಗಿರುವ ಫ್ಲೈಯಿಂಗ್ ಸ್ಕ್ವಾಡ್ ಅಕ್ರಮ ಮದ್ಯ ದಾಸ್ತಾನು ಅಡ್ಡೆಗಳ ಮೇಲೆ ದಾಳಿ ನಡೆಸಿದೆ. ಸೈಬರ್ ಕಟ್ಟೆ ಸ್ವಾಗತ ಬಾರ್ ನಲ್ಲಿ ರಶೀದಿ ರಹಿತ ಮದ್ಯ ಮಾರಾಟದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು.
ಈ ಸಂದರ್ಭದಲ್ಲಿ ಬಾರ್ ಮಾಲೀಕ ಅಶೋಕ್ ಪ್ರಭು ಅವರ ಕರೆ ಮೇರೆಗೆ ಸ್ಥಳಕ್ಕೆ ಬಂದ ಬಾರ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.

ದಾಳಿ ಮಾಡಿದ್ದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮಧು ಅವರನ್ನು ರೈಡ್ ಮಾಡುವ ಅಧಿಕಾರ ನಿಮಗೆ ಯಾರು ನೀಡಿದರು? ಎಂದು ಗೋವಿಂದರಾಜ್ ಪ್ರಶ್ನಿಸಿದ್ದಾರೆ. ರೈಡ್ ಆದೇಶದ ಪ್ರತಿ ನೀಡಿ ಇಲ್ಲವಾದರೆ ಕೋರ್ಟ್ ಗೆ ಎಳೆಯುತ್ತೇನೆ ಎಂದು ಅಧಿಕಾರಿಗಳಿಗೆ ಬಾರ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಲಾಗಿದೆ.
ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನು ಬಾರ್ ನಿಂದ ಹೊರದೂಡುವ ರೀತಿಯಲ್ಲಿ ಗೋವಿಂದರಾಜ್ ಹೆಗ್ಡೆ ವರ್ತಿಸಿದ ಹಿನ್ನೆಲೆಯಲ್ಲಿ ಗೋವಿಂದ ರಾಜ್ ಅವರ ವಿರುದ್ಧ ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರನ್ನು ಅಧಿಕಾರಿಗಳು ದಾಖಲು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಕಲೇಶಪುರದಲ್ಲಿ ಗೋವಿಂದ ರಾಜ್ ಅವರನ್ನು ಬಂಧಿಸಲಾಗಿದ್ದು, ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.












Click it and Unblock the Notifications