ಪ್ರವೀಣ್ ನೆಟ್ಟಾರು ಹತ್ಯೆ: ಮೂವರು ಆರೋಪಿಗಳಿಲ್ಲ ಜಾಮೀನು
ಮಂಗಳೂರು, ಅಕ್ಟೋಬರ್ 05; ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಹಾಗಾಗಿ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಕೆ. ಇಸ್ಮಾಯಿಲ್ ಶಫಿ, (ಆರೋಪಿ 9) ಕೆ. ಮೊಹಮ್ಮದ್ ಇಕ್ಬಾಲ್ (ಆರೋಪಿ 10) ಮತ್ತು ಎಂ. ಶಾಹೀದ್ (ಆರೋಪಿ 11) ಸದ್ಯ ಜೈಲಿನಲ್ಲೇ ಇರಬೇಕಾಗುತ್ತದೆ.
ಮೂವರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್. ಬಿ. ಪ್ರಭಾಕರ್ ಶಾಸ್ತ್ರಿ ಮತ್ತು ಅನಿಲ್ ಕೆ. ಕಟ್ಟಿ ಅವರಿದ್ದ ವಿಭಾಗೀಯಪೀಠ ವಜಾಗೊಳಿಸಿದೆ. ಆರೋಪಿಗಳು ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸುವುದನ್ನು ತೋರಿಸಲು ಸೂಕ್ತ ಸಾಕ್ಷ್ಯಧಾರಗಳು ಲಭ್ಯವಿದೆ ಎಂದು ಕೋರ್ಟ್ ಹೇಳಿದೆ.

ಮೃತನ ಮೇಲೆ ದಾಳಿ ನಡೆದ ವೇಳೆ ಸ್ಥಳದಲ್ಲಿ ಈ ಮೂರು ಆರೋಪಿಗಳು ಭೌತಿಕವಾಗಿ ಹಾಜರಲಿಲ್ಲ. ಆದರೆ, ಪ್ರವೀಣ್ ನೆಟ್ಟಾರು ಹತ್ಯೆಗೆ ಯೋಜನೆ ರೂಪಿಸಲು ಹಮ್ಮಿಕೊಂಡಿದ್ದ ಪಿತೂರಿ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಹತ್ಯೆ ಯೋಜನೆ ಬಗ್ಗೆ ಚರ್ಚಿಸಿದ್ದರು ಎಂದು ನ್ಯಾಯಪೀಠ ಹೇಳಿದೆ.
ಸಾಕ್ಷ್ಯಗಳು ಕೋರ್ಟ್ ಮುಂದೆ ಇದೆ; ನಾಲ್ವರು ಸಾಕ್ಷಿಗಳ ಹೇಳಿಕೆ ಪ್ರಕಾರ ಆರೋಪಿಗಳು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ತನಿಖಾಧಿಕಾರಿಗಳು ಸಂಗ್ರಹಿಸಿರುವ ಆರೋಪಿಗಳ ಪೋನ್ ಕರೆಗಳ ವಿವರಗಳು ಸಹ ಪ್ರಕರಣದಲ್ಲಿ ಮೇಲ್ಮನವಿದಾರ ಆರೋಪಿಗಳು ಪಿತೂರಿ ನಡೆಸುವುದನ್ನು ತೋರಿಸುತ್ತದೆ. ಆರೋಪಿಗಳು ಪ್ರಕರಣದಲ್ಲಿ ನಿರ್ದಿಷ್ಟ, ಸಕ್ರಿಯ ಮತ್ತು ಗಮನಾರ್ಹ ಪಾತ್ರ ನಿರ್ವಹಿಸುವುದನ್ನು ಮೇಲ್ನೋಟಕ್ಕೆ ದೃಢಪಡಿಸುವ ಸಾಕ್ಷ್ಯಗಳು ನ್ಯಾಯಾಲಯದ ಮುಂದಿದೆ ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ಮೇಲ್ಮನವಿದಾರರು ನೆಟ್ಟಾರು ಹತ್ಯೆಯ ಪಿತೂರಿಯಲ್ಲಿ ಭಾಗವಹಿಸಿರುವುದು ದೃಢಪಟ್ಟಿದ್ದು, ಅದು ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸುವ, ಪ್ರೋತ್ಸಾಹಿಸುವ ಮತ್ತು ಸುಗಮಗೊಳಿಸುವಾಗಿದೆ. ಜತೆಗೆ, ಕಾನೂನು ಬಾಹಿರ ಚುಟುವಟಿಕೆಗಳ ತಡೆ ಕಾಯಿದೆಯಡಿ (ಯುಎಪಿ) ಭಯೋತ್ಪಾದಕ ಕೃತ್ಯದ ಪೂರ್ವಸಿದ್ಧತೆ ಕ್ರಿಯೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿ ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.
ಪ್ರಕರಣದ ಹಿನ್ನಲೆ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಪ್ರವೀಣ್ ನೆಟ್ಟಾರು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಮೋಟಾರು ವಾಹನದಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಮೇಲೆ ದಾಳಿ ನಡೆಸಿ, ಆತನ ತಲೆ ಮತ್ತು ಕುತ್ತಿಗೆ ಭಾಗದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರ್‌ರನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ, ಮಾರ್ಗಮಧ್ಯೇ ಅವರು ಕೊನೆಯುಸಿರೆಳೆದಿದ್ದರು.
ಪ್ರವೀಣ್ ಸ್ನೇಹಿತ ಮಧು ಕುಮಾರ್ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದ ವೇಳೆ ಪ್ರಕರಣವನ್ನು ಎನ್‌ಐಎಗೆ ವಹಿಸಿ 2022ರ ಆ.3ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. 2022ರ ಆ.4ರಂದು ಎನ್‌ಐಎ ತನಿಖಾಧಿಕಾರಿಗಳು ಪ್ರಕರಣವನ್ನು ಮತ್ತೆ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ಮುಂದುವರಿಸಿ, ಮೇಲ್ಮನವಿದಾರ ಆರೋಪಿಗಳನ್ನು ಬಂಧಿಸಿದ್ದರು.
ಈ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿ 49ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ (ಎನ್‌ಐಎ ವಿಶೇಷ ನ್ಯಾಯಾಲಯ) 2023ರ ಏ.29ರಂದು ಆದೇಶಿಸಿತ್ತು. ಇದರಿಂದಾಗಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಆರೋಪಿಗಳ ವಿರುದ್ಧದ ಪ್ರಕರಣವು ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.












Click it and Unblock the Notifications