ಕಟೀಲ್‌ಗೆ ವಿಶ್ವಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿದ್ರೂ ಪರ್ವಾಗಿಲ್ಲ, ಆದ್ರೆ ದ.ಕನ್ನಡ ಜಿಲ್ಲೆಯ ಸಂಸದ ಸ್ಥಾನ ಕೊಡ್ಬೇಡಿ, ವೈರಲ್
ಮಂಗಳೂರು, ಮೇ, 15: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ರಾಜ್ಯಾದ್ಯಂತ ಸೋಲನುಭವಿಸುವ ಮೂಲಕ ಬಿಜೆಪಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಅದರಲ್ಲೂ ಮಂಗಳೂರಿನಲ್ಲಿ ಬಿಜೆಪಿ ನಾಯಕರ ವಿರುದ್ಧ ಪಕ್ಷದ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ಭುಗಿಲೆದ್ದಿವೆ.
"ನಳಿನ್ ಕುಮಾರ್ ಕಟೀಲ್ ಅವರನ್ನು ಬೇಕಾದರೆ ರಾಜ್ಯಸಭಾ ಸದಸ್ಯರಾಗಿ ಮಾಡಿ, ಯಾವುದೋ ರಾಜ್ಯದ ರಾಜ್ಯಪಾಲರಾಗಿ ಮಾಡಿ, ಉಪರಾಷ್ಟ್ರಪತಿ ಮಾಡಿ, ವಿಶ್ವಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿ, ಸಂಪೂರ್ಣ ಸೌರ ಮಂಡಲದ ಅಧ್ಯಕ್ಷರನ್ನಾಗಿ ಮಾಡಿ, ಅಷ್ಟೇ ಅಲ್ಲದೆ ಸಂಪೂರ್ಣ ಬ್ರಹ್ಮಾಂಡದ ಮುಖ್ಯಸ್ಥರನ್ನಾಗಿ ಮಾಡಿ. ಆದರೆ ದಯವಿಟ್ಟು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರನ್ನಾಗಿ ಮಾತ್ರ ಮಾಡಬೇಡಿ" ಎನ್ನುವ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಲ್ಲದೆ ಈ ಪೋಸ್ಟರ್ ಕೆಳಗಡೆ ಜೈ ಮೋದಿಜಿ, ಜೈ ಬಿಜೆಪಿ ಅಂತಲೂ ಬರೆದುಕೊಂಡಿದ್ದಾರೆ. ಮತ್ತೊಂದೆಡೆ ಪುತ್ತೂರು ಸೇರಿದಂತೆ ರಾಜ್ಯದೆಲ್ಲೆಡೆ ಬಿಜೆಪಿ ಹೀನಾಯ ಸೋಲನುಭವಿಸುವ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಇದರಿಂದ ಬೇಸತ್ತ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಡಿ.ವಿ.ಸದಾನಂದ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪುತ್ತೂರಿನ ಬಸ್ ನಿಲ್ದಾಣದ ಬಳಿ ನಡೆದಿದೆ.
ಬಿಜೆಪಿ ಕಾರ್ಯಕರ್ತರ ಆಕ್ರೋಶ
ಈಗಾಗಲೇ ರಾಜ್ಯದಲ್ಲೆಡೆ ಬಿಜೆಪಿ ಸೋಲುಂಡಿದ್ದು, ಇದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಪ್ರಮುಖವಾಗಿ ಘಟಾನುಘಟಿ ಬಿಜೆಪಿ ನಾಯಕರೇ ಸೋಲುಂಡಿರುವುದು ಆಶ್ಚರ್ಯ ಮೂಡಿಸಿದೆ. ಇದನ್ನೆಲ್ಲ ಗಮನಿಸಿದರೆ ಬಿಜೆಪಿ ಕಾರ್ಯಕರ್ತರೇ ಪುತ್ತೂರಿನಲ್ಲಿ ಬಿಜೆಪಿ ನಾಯಕರ ಭಾವಪೂರ್ಣ ಶ್ರದ್ಧಾಂಜಲಿ ಬ್ಯಾನರ್ ಮಾಡಿಸಿದ್ದು, ಅದರಲ್ಲಿರುವ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಅಷ್ಟೇ ಅಲ್ಲದೆ "ಬಿಜೆಪಿ ಹೀನಾಯವಾಗಿ ಸೋಲಲು ಕಾರಣರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ" ಅಂತಾ ಬ್ಯಾನರ್‌ನಲ್ಲಿ ಬರೆಸುವ ಮೂಲಕ ತಮ್ಮ ಆಕ್ರೋಶದ ಜ್ವಾಲೆಯನ್ನು ಹೊರಹಾಕಿದ್ದಾರೆ. ಈ ಬ್ಯಾನರ್ ಅನ್ನು ನೊಂದ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಅಳವಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪುತ್ತೂರಿನಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಹಿಂದೂ ಮುಖಂಡ ಅರುಣ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದು, ಅವರು ಕಾಂಗ್ರೆಸ್ ವಿರುದ್ದ 4 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು. ಮತ್ತೊಂದೆಡೆ ಇದೇ ಕ್ಷೇತ್ರದಲ್ಲಿ ಬಿಜೆಪಿಯು ಕೂಡ ಕಡಿಮೆ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದಗೌಡ ಅವರೇ ಕಾರಣ ಅಂತಾ ಕಿಡಿಕಾರುತ್ತಿದ್ದಾರೆ.
ಅಲ್ಪ ಮತಗಳಿಂದ ಸೋತ ಪುತ್ತಿಲ
ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಧೋರಣೆಗಳ ವಿರುದ್ಧ ಸೆಟೆದು ನಿಂತು ಪಕ್ಷೇತರವಾಗಿ ಸ್ಪರ್ಧಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಚುನಾವಣೆ ಯಲ್ಲಿ ಅಲ್ಪ ಮತಗಳಿಂದ ಸೋತರೂ ಮತ್ತೆ ಕಾರ್ಯಕರ್ತರ ಪ್ರೀತಿ ಗಳಿಸಿ ಗೆದ್ದಿದ್ದಾರೆ.
ಚುನಾವಣಾ ಮತ ಎಣಿಕೆಯ ಬಳಿಕ ಕೇವಲ ಪುತ್ತೂರಿಗಷ್ಟೇ ಸೀಮಿತವಾಗಿದ್ದ ಅರುಣ್ ಕುಮಾರ್ ಅಭಿಮಾನಿ ಬಳಗ ಈಗ ಇಡೀ ಜಿಲ್ಲೆಗೆ ಹಬ್ಬಿದ್ದು ಮುಂದಿನ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಸಂಸದ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಅವರೇ ಆಯ್ಕೆಯಾಗಲಿ ಎಂಬ ಕೂಗು ಜೋರಾಗಿದೆ. ಪುತ್ತಿಲ ಪರ ವಾದ ವಾಟ್ಸಪ್ ಗ್ರೂಪ್‌ಗಳು ರಚನೆಯಾಗುತ್ತಿದ್ದು ಕೆಲವೇ ಗಂಟೆಗಳಲ್ಲಿ 20,000 ಅಧಿಕ ಜನರು ವಾಟ್ಸಪ್ ಗ್ರೂಪ್‌ಗಳಲ್ಲಿ ಸೇರಿಕೊಂಡು ಅಭಿಯಾನ ಆರಂಭಿಸಿದ್ದಾರೆ.
ಪಕ್ಷೇತರನಾಗಿ ನಿಂತು 62,458 ಮತ ಪಡೆದು ಅರುಣ್ ಪುತ್ತಿಲ ಇತಿಹಾಸ ಬರೆದಿದ್ದು, ಹಿಂದುತ್ವದ ಭದ್ರಕೋಟೆಯಲ್ಲಿ ಪುತ್ತಿಲ ಭರ್ಜರಿ ಸೆಣಸಾಟ ನಡೆಸಿದ್ದರು.ಪಕ್ಷೇತರನಾಗಿ ಸ್ಪರ್ಧಿಸಿ ಪುತ್ತಿಲ ವಿರೋಚಿತ ಸೋಲು ಕಂಡರೂ ಬಿಜೆಪಿ ಭದ್ರಕೋಟೆಯಲ್ಲಿ ಕೊನೆಗೂ ಪುತ್ತಿಲ ಪರ ಅಲೆ ಸಾಬೀತಾಗಿದೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ತವರಲ್ಲೇ ತೊಡೆ ತಟ್ಟಿದ್ದ ಪುತ್ತಿಲ ಹೊಸ ದಾಖಲೆ ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ಪಡೆದ ಅತೀ ಹೆಚ್ಚಿನ ಮತದ ದಾಖಲೆ ಪುತ್ತಿಲರದ್ದಾಗಿದ್ದು, ಕಾಂಗ್ರೆಸ್ ವಿರುದ್ದ ಕೇವಲ 4 ಸಾವಿರದಷ್ಟು ಮತದ ಅಂತರದ ಸೋಲು ಕಂಡಿದ್ದಾರೆ. ಬಿಜೆಪಿ ಬಾವುಟದ ವಿರುದ್ದ ಭಗವಾಧ್ವಜದಡಿ ಸೆಣಸಾಡಿ ಪುತ್ತಿಲ ಗೆದ್ದಿದ್ದಾರೆ. ಮಾತ್ರವಲ್ಲ ಬಿಜೆಪಿಯನ್ನು ಮಕಾಡೆ ಮಲಗಿಸಿ ಕಾಂಗ್ರೆಸ್‌ಗೂ ಭಯ ಹುಟ್ಟಿಸಿದ್ದಾರೆ.












Click it and Unblock the Notifications