ಬಿಲ್ಡರ್ ಕೊಲೆಗೆ ಸಂಚು, ರವಿ ಪೂಜಾರಿ ಸಹಚರರ ಬಂಧನ
ಮಂಗಳೂರು, ಜೂ. 22 : ಮಂಗಳೂರು ನಗರದ ಇಬ್ಬರು ಪ್ರತಿಷ್ಠಿತ ಬಿಲ್ಡರ್ ಗಳ ಕೊಲೆಗೆ ಸಂಚು ರೂಪಿಸುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೀಶನ ಇಬ್ಬರು ಸಹಚರರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಬಾಗೆಲಪಲ್ಲಿ ನಿವಾಸಿ ಸುಬ್ರಹ್ಮಣ್ಯ (27) ಮತ್ತು ಮಂಗಳೂರಿನ ಉರ್ವಾದ ನಿವಾಸಿ ಕಿರಣ್ ಯಾನೆ ಅಚ್ಚುತ ಅಲಿಯಾಸ್ ಸ್ವಾಮಿ (30) ಎಂದು ಗುರುತಿಸಲಾಗಿದೆ. ಬಂಧಿತರಿಂದ 3 ಪಿಸ್ತೂಲು ಮತ್ತು 17 ಸಜೀವ ಮದ್ದು ಗುಂಡುಗಳನ್ನು ಹಾಗೂ 1,50,000 ರೂ. ನಗದು, 2 ಮೊಬೈಲ್ ಫೋನ್ ಸಹಿತ ಒಟ್ಟು 7,53,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಅವರು, ಭೂಗತ ಪಾತಕಿಗಳಾದ ರವಿ ಪೂಜಾರಿ ಮತ್ತು ಕಲಿ ಯೋಗೀಶನ ಸೂಚನೆಯಂತೆ ಮಂಗಳೂರಿನ ಇಬ್ಬರು ಪ್ರತಿಷ್ಠಿತ ಬಿಲ್ಡರ್ ಗಳ ಕೊಲೆಗೆ ಇವರು ಸಂಚು ರೂಪಿಸಿದ್ದರು. ಬಜಪೆ ಪೆರ್ಮುದೆಯ ಬಳಿ ಇರುವ ಶೆಡ್ ಒಂದರಲ್ಲಿದ್ದ ಆರೋಪಿಗಳಿದ್ದಾಗ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

15 ದಿನಗಳಲ್ಲಿ ಮತ್ತೆ ಸಿಕ್ಕಿ ಬಿದ್ದ
ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರು ಸುಬ್ರಹ್ಮಣ್ಯ ಜೂ.2ರಂದು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ಪುನಃ 15 ದಿನಗಳಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. 2009 ರಲ್ಲಿ ವಕೀಲ ನೌಶಾದ್ ಖಾಶಿಂಜಿ ಕೊಲೆ ಪ್ರಕರಣ, 2011 ರಲ್ಲಿ ಉದ್ಯಮಿಗಳಿಗೆ ಬೆದರಿಕೆ ಹಾಕಿದ ಪ್ರಕರಣ, ಉದ್ಯಮಿಯ ಅಪಹರಣ ಪ್ರಯತ್ನ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪುನಃ ಜೈಲು ಸೇರಿದ ಕಿರಣ್
ಬಂಧಿತ ಕಿರಣ್ 2011 ರಲ್ಲಿ ನಾಗೇಶ್ ಪೂಜಾರಿ ಕೊಲೆಗೆ ಯತ್ನಿಸಿದ್ದಲ್ಲದೆ 2012 ರಲ್ಲಿ ಯೂನಿಟಿ ಆಸ್ಪತ್ರೆಯ ಬಳಿ ಸಂಭವಿಸಿದ ಬಿಜೈ ರಾಜಾನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಆರೋಪದ ಮೇಲೆ ಜೈಲು ಸೇರಿದ್ದು, 8 ತಿಂಗಳ ಹಿಂದೆಯಷ್ಟೇ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.

ಹತ್ಯೆಗೆ ಹಣ ಬಂದಿತ್ತು
ಇಬ್ಬರು ಪ್ರತಿಷ್ಠಿತ ಬಿಲ್ಡರ್ ಗಳ ಕೊಲೆಗೆ ಕೊರಿಯರ್ ಮೂಲಕ ಹಣ ಪಾವತಿಯಾಗಿತ್ತು. ಆರೋಪಿಗಳಿಗೆ ಒಟ್ಟು 2.5 ಲಕ್ಷ ರೂ. ನಗದು ಕೊರಿಯರ್ ಮೂಲಕ ಬಂದಿದ್ದು, ಅದರಲ್ಲಿ 1.5 ಲಕ್ಷ ರೂ. ಮಾತ್ರ ಪತ್ತೆಯಾಗಿದೆ. ಇನ್ನುಳಿದ 1 ಲಕ್ಷ ರೂ. ಬೇರೆ ಉದ್ದೇಶಕ್ಕಾಗಿ ಬಳಕೆಯಾಗಿದೆ ಎಂದು ಶಂಕಿಸಲಾಗಿದೆ.

ಬಂಧಿತರಿಂದ 3 ಪಿಸ್ತೂಲ್ ವಶ
ಇಬ್ಬರು ಬಂಧಿತ ಆರೋಪಿಗಳಿಂದ 3 ಪಿಸ್ತೂಲು ಮತ್ತು 17 ಸಜೀವ ಮದ್ದು ಗುಂಡುಗಳನ್ನು ಹಾಗೂ 1,50,000 ರೂ. ನಗದು, 2 ಮೊಬೈಲ್ ಫೋನ್ ಸಹಿತ ಒಟ್ಟು 7,53,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರು
ಸುಬ್ರಹ್ಮಣ್ಯ ಮತ್ತು ಕಿರಣ್ ಬಂಧಿಸುವ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ವೆಲೆಂಟೈನ್ ಡಿಸೋಜಾ, ಪಿ.ಎಸ್.ಐ. ಶ್ಯಾಂ ಸುಂದರ್, ಸಿಬ್ಬಂದಿಗಳಾದ ಶಶಿಧರ ಶೆಟ್ಟಿ, ಗಣೇಶ್ ಎಂ.ಪಿ., ಗಣೇಶ್ ಕಲ್ಲಡ್ಕ, ವೇಣುಗೋಪಾಲ್, ಚಂದ್ರಶೇಖರ, ದಿನೇಶ್ ಬೇಕಲ್, ರಾಜೇಂದ್ರ ಪ್ರಸಾದ್, ಸುಧೀರ್ ಶೆಟ್ಟಿ, ಅಬ್ದುಲ್ ಜಬ್ಟಾರ್, ಮಣಿ ಎಂ.ಎನ್., ತೇಜ ಕುಮಾರ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications