ಬೃಹತ್ ಸೈಬರ್ ಕ್ರೈಂ ಜಾಲ ಭೇದಿಸಿದ ಮಂಗಳೂರು ಪೊಲೀಸರು
ಮಂಗಳೂರು, ಜುಲೈ 6: ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ತಂಡವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಭಾರತಿ ಫೈನಾನ್ಸ್ ನಿಂದ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ನೀಡುತ್ತೇವೆ ಎಂದು ಕರೆ ಮಾಡಿ ಮುಂಚಿತವಾಗಿ ಹಣ ಪಡೆದು ವಂಚನೆ ಮಾಡಿದ ಪ್ರಕರಣವನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಹೊಸದಿಲ್ಲಿಯ ಪೊಲೀಸರ ಸಹಕಾರದಿಂದ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಹೊಸದಿಲ್ಲಿಯ ಸೌತ್‌ವೆಸ್ಟ್‌ನ ಜಗದಂಬಾ ವಿಹಾರ್ ಬಳಿ ವಾಸವಿದ್ದ ಯೂಸುಫ್ ಖಾನ್ (29) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 31 ಮೊಬೈಲ್ ಫೋನ್, 2 ಲ್ಯಾಪ್‌ಟಾಪ್, ಸಾಲದ ಬಗ್ಗೆ ಮಾಹಿತಿ ಬರೆದಿರುವ 10 ಪುಸ್ತಕಗಳು, 70 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಈತನ ಸಹಚರರಾದ ನೌಷಾದ್ ಮತ್ತು ಪ್ರಭಾಕರ ಎಂಬುವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೂ ಪೊಲೀಸರು ಹುಡುಕಾಡುತ್ತಿದ್ದಾರೆ.
ಮಂಗಳೂರಿನ ಕಾರ್ತಿಕ್ ಪೂಜಾರಿ ಎಂಬುವರಿಗೆ ಭಾರತೀ ಫೈನಾನ್ಸ್ ನಿಂದ ಕರೆ ಮಾಡುವುದಾಗಿ ಹೇಳಿ ನೇಹಾ ಎಂದು ಪರಿಚಯಿಸಿಕೊಂಡ ಮಹಿಳೆ, ಮೊದಲು 2 ಲಕ್ಷ ರೂಪಾಯಿಯನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ, ನಂತರ ಹೆಚ್ಚಿನ ಹಣವನ್ನು ಕೊಡುವುದಾಗಿ ನಂಬಿಸಿದ್ದಳು. ನಿಜವೆಂದು ನಂಬಿದ ಕಾರ್ತಿಕ್ ಆಕೆ ತಿಳಿಸಿದಂತೆ ಸಾಲದ ಸೆಕ್ಯೂರಿಟಿ ಚಾರ್ಜ್, ಇನ್ಸೂರೆನ್ಸ್ ಇತ್ಯಾದಿ ಒಟ್ಟು 1.70 ಲಕ್ಷ ರೂಪಾಯಿ ಪಾವತಿಸಿದ್ದರು. ಅವರು ತಿಳಿಸಿದ ವಿವಿಧ ಖಾತೆಗಳಿಗೆ ಜಮಾ ಮಾಡಿ ಮೋಸ ಹೋಗಿರುವುದಾಗಿ ತಿಳಿದ ಕಾರ್ತಿಕ್ ನಂತರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸರು ವಂಚನೆ ಮಾಡಿದ ಮೊಬೈಲ್ ನಂಬರ್ ಗಳ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿ ಹೊಸದಿಲ್ಲಿಯ ಜನಕಪುರಿ ಸುತ್ತಮುತ್ತ ಹಾಗೂ ಇತರ ಕಡೆಗಳಲ್ಲಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದರು. ಹೊಸದಿಲ್ಲಿಯ ಪೊಲೀಸರ ಸಹಕಾರ ಪಡೆದು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ಬಂಧಿತ ಆರೋಪಿ ಹೊಸದಿಲ್ಲಿಯಲ್ಲಿದ್ದುಕೊಂಡು ದೇಶದ ಉದ್ದಗಲಕ್ಕೂ ವಂಚನಾ ಜಾಲ ಬೀಸಿದ್ದ. ಕಳೆದ 6 ತಿಂಗಳಿನಿಂದ ಸುಮಾರು 400ಕ್ಕಿಂತಲೂ ಅಧಿಕ ಮಂದಿಗೆ ಕರೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.












Click it and Unblock the Notifications