ಮತ್ತೆ ಸುದ್ದಿಯಾದ ಮಂಗಳೂರು ಜೈಲು:ಪೊಕ್ಸೊ ಆರೋಪಿಯ ಕೊಲೆಗೆ ಯತ್ನ
ಮಂಗಳೂರು, ಮಾರ್ಚ್ 07: ಮಂಗಳೂರು ಜೈಲು ಮತ್ತೆ ಸುದ್ದಿಯಾಗಿದೆ. ಇಂದು ಮುಂಜಾನೆ ಜೈಲಿನಲ್ಲಿ ಖೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಪೊಕ್ಸೊ ಪ್ರಕರಣ ಆರೋಪಿಯೊಬ್ಬನನ್ನು ಸಹ ಕೈದಿಗಳು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯ ವ್ಯಾಪ್ತಿಯ ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಬರುದ್ದೀನ್ ಎಂಬುವವನನ್ನು ಮಾರ್ಚ್ 5 ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನಿನ್ನೆ ಬುಧವಾರ (ಮಾ.06)ಮಂಗಳೂರು ಜೈಲಿಗೆ ಹಾಕಲಾಗಿತ್ತು.
ಇಂದು ಗುರುವಾರ ಮುಂಜಾನೆ ಜೈಲಿನ ಎ ಬ್ಲಾಕ್ ಖೈದಿಗಳನ್ನು ಹೊರಗೆ ಬಿಟ್ಟಾಗ ಅಕ್ಬರುದ್ದೀನ್ ಮೇಲೆ 4 ಮಂದಿ ಸಹ ಖೈದಿಗಳು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಅಕ್ಬರುದ್ದೀನ್ ತಲೆಗೆ ಗಂಭೀರ ಗಾಯವಾಗಿದ್ದು, ಆತನನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಖೈದಿಗಳ ನಡುವೆ ಘರ್ಷಣೆ ಸಂಭವಿಸಿದಾಗ ಭದ್ರತಾ ಸಿಬ್ಬಂದಿಗಳು ಮಧ್ಯ ಪ್ರವೇಶಿಸಿ ವಿಚಾರಣಾಧೀನ ಖೈದಿ ಅಕ್ಬರುದ್ದೀನ್ ನನ್ನು ಪಾರು ಮಾಡಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದ ಸಂದೀಪ್ ಪಾಟೀಲ್ ಜೈಲಿನಲ್ಲಿ ಕೆಲ ವಸ್ತುಗಳನ್ನು ರೈಡ್ ಮಾಡಿದ್ದರು. ಈ ಸಂದರ್ಭದಲ್ಲಿ ಜೈಲಿನಲ್ಲಿ ಅಡಗಿಸಿಡಲಾಗಿದ್ದ ಚೂರಿ ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದರು.











Click it and Unblock the Notifications