ದೇಶದ ಬೆಳವಣಿಗೆಯಲ್ಲಿ ಮೋದಿ ಪಾತ್ರ ಮುಖ್ಯ - ಮಂಗಳೂರಲ್ಲಿ ಕೇಂದ್ರ ಸಚಿವ
ಮಂಗಳೂರು, ಜೂನ್ 7: ಕಳೆದ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿದ್ದರೆ ಅದಕ್ಕೆ ಪ್ರಧಾನಿ ಮೋದಿಯವರ ಕಾರ್ಯದಕ್ಷತೆಯೇ ಕಾರಣ ಎಂದು ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಪಿ.ಪಿ ಚೌಧರಿ ಹೇಳಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ಕೇಂದ್ರದ ಎನ್‌ಡಿಎ ಸರಕಾರದ ಮೂರು ವರ್ಷಗಳ ಸಾಧನೆಯ ಕುರಿತಾದ 'ಸಬ್‌ಕಾ ಸಾತ್ ಸಬ್ ಕಾ ವಿಕಾಸ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು "ದಿನದ 18ರಿಂದ 20 ಗಂಟೆ ಪ್ರಧಾನಿ ಖುದ್ದಾಗಿ ದೇಶದ ಅಭಿವೃದ್ದಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜತೆಗೆ ಇತರಿಂದ ಸಚಿವರು, ಜನಪ್ರತಿನಿಧಿಗಳೂ ಪ್ರೇರಣೆಯಾಗಿದ್ದಾರೆ," ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು, ಶೈಕ್ಷಣಿಕ ಹಬ್ ಆಗಿ ದೇಶದಲ್ಲಿ ಗುರುತಿಸಿಕೊಂಡಿರುವ ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ರಾಷ್ಟ್ರೀಯ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ತೆರೆಯುವ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸುವಂತೆ ಸಂಸದರಿಗೆ ಸಲಹೆ ನೀಡಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ತಮ್ಮ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಜನಧನ್, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಜನಸಾಮಾನ್ಯರಿಗೂ ಪಿಂಚಣಿ ಸೌಲಭ್ಯದಂಥ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಉಜಾಲ ಯೋಜನೆಯಡಿ ಅಡುಗೆ ಅನಿಲ ವಿತರಣೆ, ಮುದ್ರಾ ಯೋಜನೆಯಡಿ ಯುವ ಉದ್ಯಮಿಗಳಿಗೆ ಸಾಲ ಸೌಲಭ್ಯ, ಶೌಚಾಲಯ ಮುಕ್ತ ಗ್ರಾಮ ಮೊದಲಾದ ಅಭಿವೃದ್ದಿಪರ ಯೋಜನೆಗಳ ಜತೆಯಲ್ಲೇ ನೋಟು ಅಮಾನ್ಯೀಕರಣದದ ಮೂಲಕ ಭ್ರಷ್ಟಚಾರಕ್ಕೆ ಕಡಿವಾಣ ಹಾಕಿದ್ದಾರೆ," ಎಂದು ಚೌಧರಿ ಹೇಳಿದರು.

"ಮುಂದಿನ ಎರಡು ವರ್ಷಗಳಲ್ಲಿ ರೈತರ ಸಮಸ್ಯೆಗಳ ಬಗ್ಗೆಯೂ ಕೇಂದ್ರ ಸರಕಾರ ಸೂಕ್ತವಾದ ಪರಿಹಾರವನ್ನು ಒದಗಿಸಲಿದೆ. ಈಗಾಗಲೇ ಮಣ್ಣು ಆರೋಗ್ಯ ಕಾರ್ಡ್, ಯೂರಿಯಾ ಕಾಳ ಸಂತೆಯಲ್ಲಿ ಮಾರಾಟಕ್ಕೆ ತಡೆ ಹಾಕುವ ಕಾರ್ಯವನ್ನು ಮಾಡಿ ರೈತರ ಹಿತವನ್ನು ಕಾಪಾಡಲಾಗಿದೆ," ಎಂದು ಅವರು ಕೇಂದ್ರ ಸರಕಾರದ ಸಾಧನೆಗಳ ವಿವರ ನೀಡಿದರು.
ಸಭೆಯನ್ನುದ್ದೇಶಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ , "ದಕ್ಷಿಣ ಕನ್ನಡ ಜಿಲ್ಲೆಗೆ ರೈಲ್ವೇಗಾಗಿ 1243 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿಗಾಗಿ 7456 ಕೋಟಿ ರೂ., ದ.ಕ. ಜಿಲ್ಲಾ ಪಂಚಾಯತ್‌ಗೆ 14ನೇ ಹಣಕಾಸು ಯೋಜನೆಯಡಿ 426 ಕೋಟಿ ರೂ., ಆರ್‌ಎಂಸ್‌ನಡಿ 29 ಕೋಟಿ ರೂ., ಸರ್ವ ಶಿಕ್ಷಾ ಅಭಿಯಾನದಡಿ 6.5 ಕೋಟಿ ರೂ., ಅಕ್ಷರ ದಾಸೋಹದಡಿ 92 ಕೋಟಿ ರೂ., ಬಂದರು ಅಭಿವೃದ್ದಿಗೆ 300 ಕೋಟಿ ರೂ., ಸಡಕ್ ಯೋಜನೆಯಡಿ 69 ಕೋಟಿ ರೂ., ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆಗೆ 1066 ಕೋಟಿ ರೂ. ಸೇರಿದಂತೆ ಒಟ್ಟು ಮೂರು ವರ್ಷಗಳ ಅವಧಿಯಲ್ಲಿ ಕೇಂದ್ರದಿಂದ 1, 29,365 ಕೋಟಿ ರೂ. ಅನುದಾನ ಮಂಗಳೂರಿಗೆ ಸಿಕ್ಕಿದೆ," ಎಂದರು.












Click it and Unblock the Notifications