ಬೆಳ್ತಂಗಡಿ : ಮೂತ್ರ ಕುಡಿಸಿ ವಿದ್ಯಾರ್ಥಿಗೆ ಕಿರುಕುಳ
ಮಂಗಳೂರು, ಆ.21 : ಅಂಗವಿಕಲ ವಿದ್ಯಾರ್ಥಿಯೊಬ್ಬನಿಗೆ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಮೂತ್ರ ಕುಡಿಸಿದ ಅಮಾನವೀಯ ಘಟನೆ ಬೆಳ್ತಂಗಡಿ ಪೊಲೀಸ್ ಠಾಣೆಯ ನಾಳಾದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿದಂತೆ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಗೇರುಕಟ್ಟೆ ಸನಿಹದ ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿಗೆ ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ. ಬುಧವಾರ ಸಂಜೆ ಈತ ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದಾಗ 6ನೇ ತರಗತಿಯ ಮೂವರು ವಿದ್ಯಾರ್ಥಿಗಳು ಆತನ ಕೈಯಲ್ಲಿದ್ದ ನೀರಿನ ಬಾಟಲಿಗೆ ಮೂತ್ರ ಬೆರೆಸಿ ಬಲವಂತವಾಗಿ ಕುಡಿಸಿದ್ದಾರೆ.

ಮನೆಗೆ ಬಂದ ಬಾಲಕ ಕೈ ಸನ್ನೆ ಮೂಲಕ ಘಟನೆಯನ್ನು ಪೋಷಕರಿಗೆ ತಿಳಿಸಲು ಪ್ರಯತ್ನಿಸಿದ್ದಾನೆ. ಆದರೆ, ಮನೆಯವರಿಗೆ ಅದು ಸರಿಯಾಗಿ ಅರ್ಥವಾಗಿಲ್ಲ. ಗುರುವಾರ ಶಾಲೆಗೆ ಹೋಗಲು ನಿರಾಕರಿಸಿದಾಗ, ತಂದೆ-ತಾಯಿ ಶಾಲೆಗೆ ಬಂದು ಮಾಹಿತಿ ನೀಡಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಬಾಲಕನ ತಂದೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು ವಿದ್ಯಾರ್ಥಿಗಳನ್ನು ಮಂಗಳೂರಿನ ರಿಮಾಂಡ್ ಹೋಮಿಗೆ ಸೇರಿಸಲಾಗಿದೆ.
ವಿದ್ಯಾರ್ಥಿಗಳು ಆರೋಪಿಗಳೆಂದು ಅವರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದರಿಂದ ಅವರ ಪೋಷಕರು ಮುಖ್ಯಶಿಕ್ಷಕರ ಬಳಿ ಗಲಾಟೆ ಮಾಡಿದ್ದಾರೆ. ಸಮಸ್ಯೆಯನ್ನು ಶಾಲೆಯಲ್ಲಿಯೇ ಬಗೆಹರಿಸಬಹುದಾಗಿತ್ತು ಎಂದು ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications