ಮಂಗಳೂರು; ಮ್ಯಾನ್ ಹೋಲ್ಗೆ ಇಳಿದು ದುರಸ್ತಿ ಮಾಡಿದ ಕಾರ್ಪೊರೇಟರ್
ಮಂಗಳೂರು, ಜೂನ್ 25: ತಮ್ಮ ಪ್ರದೇಶದಲ್ಲಿ ಏನಾದರೂ ಸಮಸ್ಯೆಯಾಗಿ, ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದರೆ ಅವುಗಳೆಡೆಗೆ ಲಕ್ಷ್ಯ ಕೊಡದವರೇ ಹೆಚ್ಚು. ಪದೇ ಪದೇ ಸಮಸ್ಯೆ ಕುರಿತು ದೂರು ನೀಡುತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿ ಆ ಸಮಸ್ಯೆಗೆ ಪರಿಹಾರ ದೊರಕಿಸುವ ಉದಾಹರಣೆಗಳಂತೂ ತೀರಾ ಕಡಿಮೆ.
ಆದರೆ ಮಳೆ ನೀರಿನ ಸಮಸ್ಯೆಯಿಂದಾಗಿ ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿ ಚರಂಡಿ ಬ್ಲಾಕ್ ಆಗಿದ್ದು, ತಕ್ಷಣವೇ ರಿಪೇರಿಯಾಗದ ಕಾರಣ ಕಾರ್ಪೊರೇಟರ್ ಒಬ್ಬರು ತಾವೇ ಮ್ಯಾನ್ ಹೋಲ್ ಗೆ ಇಳಿದು ಸರಿಪಡಿಸಿದ್ದಾರೆ. ಅವರು ಮ್ಯಾನ್ ಹೋಲ್ ಗೆ ಇಳಿದಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಇವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ವಿಡಿಯೋ ವೈರಲ್; ಅಪಘಾತವಾದ ಯುವತಿ ರಕ್ಷಿಸಿದ ಹತ್ತನೇ ತರಗತಿ ಬಾಲಕಿ
ಈಚೆಗೆ ಮಂಗಳೂರಿನ ಕದ್ರಿ ಕಂಬಳ ವಾರ್ಡ್ ನಲ್ಲಿ ಮಳೆ ನೀರಿನಿಂದಾಗಿ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲಿ ತಡೆ ಉಂಟಾಗಿತ್ತು. ಆದರೆ ಈ ಸಮಸ್ಯೆಯ ಮೂಲವೇ ತಿಳಿದುಬಂದಿರಲಿಲ್ಲ. ಇದನ್ನು ತಿಳಿದ ಬಿಜೆಪಿ ಕಾರ್ಪೊರೇಟರ್ ಮನೋಹರ್ ಶೆಟ್ಟಿ ಅವರು ತಾವೇ ಚೇಂಬರ್ ಒಳಗೆ ಇಳಿದಿದ್ದಾರೆ. ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ಸರಿಪಡಿಸುವಂತೆ ಹೇಳಿದ್ದಾರೆ. ಆದರೆ ಕಾರ್ಮಿಕರೂ ಮ್ಯಾನ್ ಹೋಲ್ ಗಿಳಿದು ಕೆಲಸ ಮಾಡಲು ಹಿಂದೆ ಮುಂದೆ ನೋಡಿದ್ದಾರೆ. ಹೀಗಾಗಿ ಕಾರ್ಪೊರೇಟರ್ ಮನೋಹರ್ ಶೆಟ್ಟಿ ಅವರು ತಾವೇ ಮನೆಯಿಂದ ಬಟ್ಟೆ ತರಿಸಿ ಚೇಂಬರ್ ಒಳಗೆ ಇಳಿದು ಮ್ಯಾನ್ ಹೋಲ್ ದುರಸ್ತಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮನೋಹರ್ ಶೆಟ್ಟಿ ಅವರು, "ಮ್ಯಾನ್ ಹೋಲ್ ಸ್ವಚ್ಛಗೊಳಿಸುವಂತೆ ಕಾರ್ಮಿಕರಿಗೆ ಹೇಳಿದೆ. ಆದರೆ, ಅವರು ಇಳಿಯಲು ತಯಾರಿರಲಿಲ್ಲ. ಹಾಗಾಗಿ ನಾನೇ ಮ್ಯಾನ್ ಹೋಲ್ಗೆ ಇಳಿದು ಪೈಪ್ ಕ್ಲೀನ್ ಮಾಡಿದೆ. ನಾನು ಮಾಡಿದ್ದನ್ನು ನೋಡಿದ ಬಳಿಕ ನನ್ನ ಪಕ್ಷದ ಕಾರ್ಯಕರ್ತರು ಬಂದು ನನಗೆ ನೆರವು ನೀಡಿದರು" ಎಂದು ಹೇಳಿದ್ದಾರೆ. ಎಲ್ಲ ಸಮಸ್ಯೆಗಳಿಗೂ ನಾವು ಸ್ಥಳೀಯ ಅಧಿಕಾರಿಗಳ ಮೇಲೆ ಅವಲಂಬಿತರಾಗಲು ಆಗುವುದಿಲ್ಲ. ಕೆಲವೊಮ್ಮೆ ಕೆಲವು ಸಮಸ್ಯೆಗಳನ್ನು ನಾವೇ ಪರಿಹರಿಸಲು ಮುಂದಾಗಬೇಕು ಎಂದೂ ತಿಳಿಸಿದ್ದಾರೆ.
ಮನೋಹರ್ ಮ್ಯಾನ್ ಹೋಲ್ಗೆ ಇಳಿದು ದುರಸ್ತಿ ಕಾರ್ಯ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೊತೆಗೆ ಇಂಥ ಕೆಲಸಗಳನ್ನು ಮಾಡಲು ಯಂತ್ರಗಳನ್ನು ಬಳಸಿದರೆ ಒಳ್ಳೆಯದು. ಅಗತ್ಯ ಉಪಕರಣಗಳಿಲ್ಲದೇ ಈ ರೀತಿ ಮ್ಯಾನ್ ಹೋಲ್ ಗೆ ಇಳಿಯುವುದೂ ಸೂಕ್ತವಲ್ಲ ಎಂದು ಕೆಲವರು ಸಲಹೆ ನೀಡಿದ್ದಾರೆ.